ನವದೆಹಲಿ, ಮಾ 26 (DaijiworldNews/DB): 2,600 ಮಂದಿಯನ್ನೊಳಗೊಂಡ ದೇಶದ ಮೊದಲ ಅಗ್ನಿವೀರರ ತಂಡ 4 ತಿಂಗಳ ಕಠಿಣ ತರಬೇತಿ ಮುಗಿಸಿ ಸೇವೆಗೆ ಸಿದ್ದವಾಗಿದೆ.
273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರು ಸೇವೆಗೆ ಸಿದ್ದರಾಗಿದ್ದಾರೆ. ಇವರೆಲ್ಲರೂ ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿ 4 ತಿಂಗಳ ಕಠಿಣ ತರಬೇತಿ ಪಡೆದಿದ್ದರು. ಈ ಎಲ್ಲರಿಗೂ ಮಾರ್ಚ್ 28ರಂದು ಪಾಸಿಂಗ್ ಔಟ್ ಪರೇಡ್ ನಡೆಯಲಿದೆ ಎಂದು ನೌಕಾಪಡೆ ತಿಳಿಸಿರುವುದಾಗಿ ವರದಿಯಾಗಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಪರೇಡ್ನ ಮುಖ್ಯ ಅತಿಥಿಯಾಗಿರಲಿದ್ದಾರೆ.
ನಿರ್ಗಮನ ಪಥಸಂಚಲನದ ಬಳಿಕ ಸಾಗರ ತರಬೇತಿಗಾಗಿ ಮುಂಚೂಣಿ ಯುದ್ದ ನೌಕೆಗಳಲ್ಲಿ ಈ ಅಗ್ನಿವೀರರನ್ನು ನಿಯೋಜನೆ ಮಾಡಲಾಗುತ್ತದೆ. ವಿಶೇಷವೆಂದರೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕೈಗೊಳ್ಳುವ ಪಾಸಿಂಗ್ ಔಟ್ ಪರೇಡ್ನ್ನು ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಈ ಬಾರಿ ಸೂರ್ಯಾಸ್ತದ ಬಳಿಕ ನಡೆಸಲಾಗುತ್ತಿದೆ.
ಮೊದಲ ತಂಡದ ಅಗ್ನಿವೀರರಿಗೆ 2022ರ ನವೆಂಬರ್ನಲ್ಲಿ ತರಬೇತಿ ಆರಂಭವಾಗಿತ್ತು. ದೈಹಿಕ ತರಬೇತಿ, ಸ್ವಿಮ್ಮಿಂಗ್, ಸಣ್ಣ ಶಸ್ತ್ರಾಸ್ತ್ರಗಳು, ಸೈಬರ್ ಭದ್ರತೆ, ನೌಕಾಪಡೆ ಕೇಂದ್ರಿತ ತರಬೇತಿಗಳನ್ನು ಅವರು ಪಡೆದುಕೊಂಡಿದ್ದಾರೆ.