ದಾವಣಗೆರೆ, ಮಾ 25 (DaijiworldNews/DB): ಬಿಜೆಪಿಯಲ್ಲಿ ದೊಡ್ಡವರು, ಚಿಕ್ಕವರೆಂಬುದಿಲ್ಲ. ಎಲ್ಲರೂ ಸಮಾನರು. ಕರ್ನಾಟಕ ಬಿಜೆಪಿಯ ಪ್ರತಿ ಕಾರ್ಯಕರ್ತನೂ ನನ್ನ ಪರಮ ಮಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲರೂ ಸಮಾನರು. ದೊಡ್ಡವರು, ಸಣ್ಣವರು ಎಂಬ ಬೇಧವಿಲ್ಲ. ಪ್ರತಿ ಕಾರ್ಯಕರ್ತನೂ ನನ್ನ ಮಿತ್ರ, ಜತೆಗಾರನಿದ್ದಂತೆ ಎಂದರು.
ಇತ್ತೀಚೆಗೆ ಕರ್ನಾಟಕದ ತುಮಕೂರಿನಲ್ಲಿ ದೊಡ್ಡ ಪಕ್ಷವೊಂದರ ದೊಡ್ಡ ನಾಯಕ, ಮಾಜಿ ಮುಖ್ಯಮಂತ್ರಿ ತಮ್ಮದೇ ಪಕ್ಷದ ಕಾರ್ಯಕರ್ತನ ಕಪಾಳಕ್ಕೆ ಬಾರಿಸಿದ ವೀಡಿಯೋವೊಂದನ್ನು ನೋಡಿದೆ. ಕಾರ್ಯಕರ್ತನನ್ನೇ ಗೌರವಿಸಲಾಗದ ಅವರಿಗೆ ಜನರನ್ನು ಗೌರವಿಸಲು ಸಾಧ್ಯವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರೆತ್ತದೆ ಪರೋಕ್ಷವಾಗಿ ಕುಟುಕಿದರು.
ಈ ವಿಜಯ ಸಂಕಲ್ಪ ರ್ಯಾಲಿಯು ವಿಜಯ ಮಹೋತ್ಸವದಂತೆಯೇ ಭಾಸವಾಗುತ್ತಿದೆ. ಇಲ್ಲಿ ವಿಜಯ ಸಂಕಲ್ಪ ರ್ಯಾಲಿಯಾಗುತ್ತಿದ್ದರೆ, ಅಲ್ಲಿ ಎಐಸಿಸಿ ಅಧ್ಯಕ್ಷರ ತವರಿನಲ್ಲಿ ಬಿಜೆಪಿಯ ಮೇಯರ್, ಉಪಮೇಯರ್ ಆಯ್ಕೆಯಾಗಿದ್ದಾರೆ. ಇದೊಂದು ಶುಭ ಸಂಕೇತವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿರುವ ಡಬಲ್ ಎಂಜಿನ್ ಸರ್ಕಾರಕ್ಕೆ ಜನರ ಶುಭಾಶೀರ್ವಾದವಿರುವುದರಿಂದಲೇ ಸರ್ಕಾರದ ಸಾಧನೆಗಳು ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿವೆ. ಜನ ಇದೇ ಉತ್ಸಾಹದಿಂದ ಮುಂದುವರಿಯಬೇಕು. ಪ್ರತಿ ಬೂತ್ನಲ್ಲಿಯೂ ಉತ್ಸಾವ ಪುಟಿದೇಳಬೇಕು. ಆ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪ ನಿಮ್ಮದಾಗಬೇಕು ಎಂದು ಪ್ರತಿಪಾದಿಸಿದರು.