ಲಕ್ನೋ, ಮಾ 25 (DaijiworldNews/DB): ರಾಜ್ಯವು ಇನ್ನು ಎಂದಿಗೂ ಅಪರಾಧಗಳಿಗೆ ಕುಖ್ಯಾತಿ ಪಡೆಯುವುದಿಲ್ಲ. ಅಪರಾಧಮುಕ್ತವಾಗುವುದರೊಂದಿಗೆ ಹಬ್ಬಗಳಿಗೆ ಪ್ರಖ್ಯಾತಿಗೊಳ್ಳಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ತಮ್ಮ ಎರಡನೇ ಅಧಿಕಾರವಧಿಯ ಒಂದು ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ರಾಜ್ಯ ಎಂದಿಗೂ ಅಪರಾಧಗಳಿಗೆ ಹೆಸರುವಾಸಿಯಾಗುವುದಿಲ್ಲ. ಹಬ್ಬಗಳಿಗೆ ಈ ರಾಜ್ಯ ಇನ್ನು ಮುಂದೆ ಪ್ರಖ್ಯಾತಿ ಪಡೆಯಲಿದೆ ಎಂದು ಪ್ರತಿಪಾದಿಸಿದರು.
ಅತ್ಯುತ್ತಮ ಹೆದ್ದಾರಿಯಂತಹ ಮೂಲಸೌಕರ್ಯವನ್ನು ನಮ್ಮ ರಾಜ್ಯ ಹೊಂದಿದೆ. ಯುಪಿ ಪೂರ್ವಾಂಚಲ್ ಎಕ್ಸ್ಪ್ರೆಸ್ವೇ, ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ, ಗಂಗಾ ಎಕ್ಸ್ಪ್ರೆಸ್ವೇ 2025ಕ್ಕೆ ಮೊದಲು ಪೂರ್ಣಗೊಳ್ಳಲಿದೆ. ದೇಶದಲ್ಲೇ ಅತ್ಯಧಿಕ ಮೆಟ್ರೋ ಇರುವುದು ನಮ್ಮ ರಾಜ್ಯದಲ್ಲಿ ಎಂದರು.
ಅಯೋಧ್ಯೆ ಮತ್ತು ಜೇವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ನಡೆಯುತ್ತಿದ್ದು, ಈ ವರ್ಷಾಂತ್ಯಕ್ಕೆ ಜನರ ಉಪಯೋಗಕ್ಕೆ ತೆರೆದುಕೊಳ್ಳಲಿದೆ. ಅತಿ ಉದ್ದದ ನದಿ ವಿಹಾರದ ಉಡುಗೊರೆ ನಮ್ಮ ರಾಜ್ಯಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದವರು ತಿಳಿಸಿದರು.