ಬೆಹ್ರಾಂಪುರ್(ಒಡಿಶಾ), ಮಾ 25 (DaijiworldNews/DB): ಪೊಲೀಸ್ ಆಗುವ ಕನಸು ಹೊತ್ತು ದೈಹಿಕ ನೇಮಕಾತಿ ಪರೀಕ್ಷೆಗೆ ಆಗಮಿಸಿದ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಗಂಜಾಮ್ ಜಿಲ್ಲೆಯ ಶ್ಯಾಮ್ ಸುಂದರ್ ಪುರ್ ಪ್ರದೇಶದ ನಿವಾಸಿ ದೀಪ್ತಿ ರಂಜನ್ ದಾಸ್ (20) ಎಂದು ಗುರುತಿಸಲಾಗಿದೆ. ಛಾತ್ರಾಪುರ್ ಪೊಲೀಸ್ ರಿಸರ್ವ್ ಮೈದಾನದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿಗಾಗಿನ ದೈಹಿಕ ಪರೀಕ್ಷೆಯಲ್ಲಿ ಈತ ಭಾಗವಹಿಸಿದ್ದ. 1,600 ಮೀಟರ್ ಓಟದಲ್ಲಿ ಭಾಗವಹಿಸಿದ್ದ ದೀಪ್ತಿ ರಂಜನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಛಾತ್ರಾಪುರ್ ಸಬ್ ಡಿವಿಶನಲ್ ಆಸ್ಪತ್ರೆಗೆ ಬಳಿಕ ಎಂಕೆಸಿಜಿ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು ಎಂದು ಗಂಜಾಮ್ ಪೊಲೀಸ್ ವರಿಷ್ಠಾಧಿಕಾರಿ ಜಗ್ ಮೋಹನ್ ಮೀನಾ ತಿಳಿಸಿದ್ದಾರೆ.
ಓಟಕ್ಕೂ ಮುನ್ನ ಆತನ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ದೈಹಿಕ ಪರೀಕ್ಷೆಯಲ್ಲಿ ಆತನ ಉತ್ತೀರ್ಣನಾಗಿದ್ದ. ಆದರೆ ಬಳಿಕ ಆತ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಮೀನಾ ತಿಳಿಸಿದ್ದಾರೆ.