ತಿರುವನಂತಪುರ, ಮಾ 25 (DaijiworldNews/DB): ಲೋಕಸಭೆ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸುವ ಮೂಲಕ ಬಿಜೆಪಿ ತಾನಾಗಿಯೇ ಸೆಲ್ಪ್ ಗೋಲು ಹೊಡೆದುಕೊಂಡಂತಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಕಾರ್ಯಾಲಯ ತೆಗೆದುಕೊಂಡಿರುವ ಈ ಕ್ರಮ ಖಂಡನೀಯ. ಆದರೆ ಇದರಿಂದ ರಾಹುಲ್ ಹಾಗೂ ವಿಪಕ್ಷಗಳಿಗೆ ಪ್ರಯೋಜನವಾಗುವುದು ನಿಶ್ಚಿತ. ಬಿಜೆಪಿ ಮಾತ್ರ ತಾನಾಗಿಯೇ ಸೆಲ್ಪ್ ಗೋಲು ಹೊಡೆದುಕೊಂಡಂತಾಗಿದೆ ಎಂದರು.
ಬಿಜೆಪಿ ದೇಶದ ಪ್ರಜಾಪ್ರಭುತ್ವವನ್ನು ಜಗತ್ತಿನೆದುರು ಕೆಟ್ಟದಾಗಿ ಬಿಂಬಿಸಿದೆ. ಆ ಪಕ್ಷದ ಮೇಲೆ ಈ ಒಂದು ಘಟನೆ ಪರಿಣಾಮ ಉಂಟು ಮಾಡುವುದು ಖಂಡಿತಾ ಎಂದವರು ಪ್ರತಿಪಾದಿಸಿದರು.
ರಾಹುಲ್ ಗಾಂಧಿಯವರ ಬಗ್ಗೆ ಇಡೀ ದೇಶ ಚರ್ಚಿಸುತ್ತಿದೆ. ಅಷ್ಟೇ ಅಲ್ಲ ಈ ಒಂದು ನಿರ್ಧಾರದಿಂದಾಗಿ ವಿಪಕ್ಷಗಳ ನಡುವೆ ಹಿಂದೆಂದೂ ಇರದ ಒಗ್ಗಟ್ಟು ಸೃಷ್ಟಿಯಾಗಿದೆ. ಕಾಂಗ್ರೆಸ್ನ್ನು ವಿರೋಧಿಸುತ್ತಿದ್ದ ಪ್ರಾದೇಶಿಕ ಪಕ್ಷಗಳು ಕೂಡಾ ಈಗ ರಾಹುಲ್ ಪರವಾಗಿ ನಿಂತಿವೆ ಮತ್ತು ಪ್ರಜಾಪ್ರಭುತ್ವದ ಮೇಲಾದ ಇಂತಹ ದಾಳಿಯನ್ನು ಖಂಡಿಸಿವೆ ಎಂದರು.