ಶ್ರೀನಗರ, ಮಾ 25 (DaijiworldNews/DB): ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ವಂಚಿಸಿದ ಪ್ರಕರಣದಲ್ಲಿ ತಮ್ಮ ಪುತ್ರ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಹಿತೇಶ್ ಪಾಂಡ್ಯ ರಾಜೀನಾಮೆ ನೀಡಿದ್ದಾರೆ.
ಹಿತೇಶ್ ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಅವರು ವಂಚನೆ ಎಸಗಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ, ಇತ್ತೀಚೆಗೆ ಗುಜರಾತ್ ಮೂಲದ ಕಿರಣ್ ಭಾಯ್ ಪಟೇಲ್ ನೇತೃತ್ವದ ನಕಲಿ ಅಧಿಕಾರಿಗಳ ತಂಡವೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿತ್ತು. ತಾವು ಪ್ರಧಾನಿ ಕಚೇರಿಯ ಅಧಿಕಾರಿಗಳೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಹಾಗೂ ಭದ್ರತಾ ವ್ಯವಸ್ಥೆಯನ್ನು ಈ ತಂಡ ನಂಬಿಸಿ ವಂಚಿಸಿತ್ತು. ಈ ತಂಡದಲ್ಲಿ ಹಿತೇಶ್ ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯಾ ಅವರೂ ಇದ್ದರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಿತೇಶ್ ಪಾಂಡ್ಯ ಅವರು ಗುಜರಾತ್ ಮುಖ್ಯಮಂತ್ರಿಗಳ ಪಿಆರ್ಒ ಸ್ಥಾನಕ್ಕೆ ನಿನ್ನೆ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದರು. ನನ್ನ ಮಗ ನಿರಪರಾಧಿ. ಆದರೂ ಗುಜರಾತ್ ಸಿಎಂ ಕಚೇರಿಯ ಘನತೆಗೆ ಧಕ್ಕೆ ಉಂಟಾಗದಂತೆ ಜಾಗೃತೆ ವಹಿಸುವ ಸಲುವಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.