ರಾಜಸ್ಥಾನ, ಮಾ 25 (DaijiworldNews/DB): ಭಾರತೀಯ ಸೇನೆಯ ಫೈರಿಂಗ್ ಅಭ್ಯಾಸದ ವೇಳೆ ಮೂರು ಕ್ಷಿಪಣಿಗಳು ಆಕಸ್ಮಿಕವಾಗಿ ಹಾರಿ ಭಾರೀ ಸ್ಪೋಟ ಸಂಭವಿಸಿದ ಘಟನೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದಿದೆ.
ಇಲ್ಲಿನ ಪೋಖ್ರಾನ್ ಬಯಲು ಪ್ರದೇಶದಲ್ಲಿ ಪ್ರತಿದಿನದಂತೆ ಪ್ರಯೋಗಾತ್ಮಕ ಫೈರಿಂಗ್ನಲ್ಲಿ ತೊಡಗಿದ್ದ ವೇಳೆ ಘಟನೆ ಸಂಭವಿಸಿದೆ. ಮೂರು ಕ್ಷಿಪಣಿಗಳನ್ನು ಹಾರಿಸುವಾಗ ಆದ ಎಡವಟ್ಟಿನಿಂದ ಸ್ಪೋಟ ಉಂಟಾಯಿತು. ನೆಲದಿಂದ ವಾಯುಪ್ರದೇಶಕ್ಕೆ ಸರಿಯಾದ ರೀತಿಯಲ್ಲಿ ಈ ಕ್ಷಿಪಣಿಗಳು ಚಿಮ್ಮದ ಕಾರಣ ಸೇನೆ ನಿಗದಿಪಡಿಸಿದ ಸ್ಥಳದ ಬದಲಾಗಿ ಬೇರೆ ಬೇರೆ ಮೂರು ಹಳ್ಳಿಗಳ ಹೊಲಗಳಲ್ಲಿ ಹೋಗಿ ಬಿದ್ದಿವೆ. ಬಿದ್ದ ಸ್ಥಳದಲ್ಲಿ ಭಾರೀ ಸ್ಪೋಟ ಉಂಟಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಅಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ ಎಂದು ವರದಿಯಾಗಿದೆ.
ಇನ್ನು ಕ್ಷಿಪಣಿ ಉಡಾವಣೆ ವೇಳೆಯೇ ಸ್ಪೋಟದ ಸದ್ದು ಕೇಳಿದೆ ಎನ್ನಲಾಗಿದೆ. ಬಳಿಕ ಬಿದ್ದ ಕ್ಷಿಪಣಿಗಳಿಗಾಗಿ ಪೊಲೀಸರು ಮತ್ತು ಸೇನಾ ಸಿಬಂದಿ ಹುಡುಕಾಟ ನಡೆಸಿದ್ದು, ಈ ಪೈಕಿ ಎರಡು ಕ್ಷಿಪಣಿಗಳ ಅವಶೇಷಗಳು ಅಜಾಸರ್ ಎಂಬ ಗ್ರಾಮದ ಕಚ್ಚಬ್ ಸಿಂಗ್ ಪ್ರದೇಶದಲ್ಲಿ ಮತ್ತು ತ್ಯಯ್ಯ ಗ್ರಾಮದ ಬಳಿ ಒಂದು ನಿರ್ಜನ ಪ್ರದೇಶದಲ್ಲಿ ಸಿಕ್ಕಿವೆ. ಇನ್ನೊಂದು ಕ್ಷಿಪಣಿಯ ಅವಶೇಷ ಸಿಗಲು ಬಾಕಿ ಇದೆ.
ಮೇಲ್ನೋಟಕ್ಕೆ ಇದೊಂದು ತಾಂತ್ರಿಕ ದೋಷದಿಂದಾಗಿ ಉಂಟಾದ ಘಟನೆ ಎಂದು ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.