ಬೆಂಗಳೂರು, ಮಾ 24 (DaijiworldNews/DB): ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದು ಅವರ ವಿರುದ್ದದ ಷಡ್ಯಂತ್ರದ ಭಾಗ ಎಂದು ಜರೆದಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ರಾಹುಲ್ ಅವರ ವಿರುದ್ದದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ ನ್ಯಾಯಾಧೀಶರ ಹಿನ್ನೆಲೆ ಪರಿಶೀಲಿಸಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಗರಿಷ್ಠ 3ರಿಂದ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಿತ್ತು. ಆದರೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸುವಂತಹ ಪ್ರಕರಣವೇ ಇದು? ಎಂದು ಪ್ರಶ್ನಿಸಿರುವ ಅವರು, ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲು ಉದ್ದೇಶಪೂರ್ವಕವಾಗಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಅನೇಕ ಬಿಜೆಪಿ ನಾಯಕರು ವಿವಿಧ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಅವರ ಭ್ರಷ್ಟಾಚಾರಕ್ಕೆ ಲೆಕ್ಕವಿಲ್ಲ. ಅಂತಹವರ ವಿರುದ್ದ ಯಾವುದೇ ಕ್ರಮ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಜನರು ಬಿಜೆಪಿಗೆ ಪಾಠ ಕಲಿಸುವುದು ನಿಶ್ಚಿತ ಎಂದರು.
ದೇಶದ ಜನತಂತ್ರ ವ್ಯವಸ್ಥೆಯೇ ಅಪಾಯಕಾರಿಯಲ್ಲಿದೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಮಾನನಷ್ಟವಾಗುವಂತಹ ಹೇಳಿಕೆಯನ್ನು ಅವರು ನೀಡದಿದ್ದರೂ ಇಂತಹ ಕ್ರಮ ಯಾಕೆ? ಎಂದು ಪ್ರಶ್ನಿಸಿದರು.
ಬಿಜೆಪಿಯ ಸರ್ವಾಧಿಕಾರಿ ಧೋರಣೆ ಮಿತಿ ಮೀರಿದೆ. ದೇಶದ ಭವಿಷ್ಯಕ್ಕೆ ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.