ಬಹ್ರೈನ್ನಿಂದ ಮಂಗಳೂರಿಗೆ ಆಗಮಿಸಲು 48 ಗಂಟೆ ತೆಗೆದುಕೊಂಡ ಇಂಡಿಗೋ ವಿಮಾನ!
Fri, Mar 24 2023 01:27:26 PM
ಬೆಂಗಳೂರು, ಮಾ 24 (DaijiworldNews/DB): ಕೆಲವೇ ಗಂಟೆಗಳಲ್ಲಿ ಬಹ್ರೇನ್ನಿಂದ ಮಂಗಳೂರಿಗೆ ಕ್ರಮಿಸಬೇಕಿದ್ದ ಇಂಡಿಗೋ ವಿಮಾನವೊಂದು ಇಲ್ಲಿಗೆ ಆಗಮಿಸಲು ಎರಡು ದಿನ ತೆಗೆದುಕೊಂಡ ಪ್ರಸಂಗ ಇತ್ತೀಚೆಗೆ ನಡೆದಿದೆ. ವಿಮಾನಯಾನ ಸಂಸ್ಥೆಯ ಈ ಕಳಪೆ ಸೇವೆಗೆ ವಿಮಾನದಲ್ಲಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ಮತ್ತು ಬಹ್ರೈನ್ನಲ್ಲಿ ಎದುರಾದ ವಿವಿಧ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಯಾತನೆ ಅನುಭವಿಸಿದ್ದರು. ಬಹ್ರೈನ್ನಲ್ಲಿ ವಿಮಾನಕ್ಕೆ ಹಕ್ಕಿ ಹೊಡೆತದಿಂದಾಗಿ ಎರಡ ದಿನಗಳಷ್ಟು ತಡವಾಗಿ ವಿಮಾನ ಆಗಮಿಸಲು ಕಾರಣವಾಯಿತು. ಆದರೆ ಮಂಗಳೂರಿಗೆ ಬರಲು ಕಾದು ಕುಳಿತಿದ್ದ ಪ್ರಯಾಣಿಕರಿಗೆ ಕನಿಷ್ಠ ಹೊಟೇಲ್ಗಳಲ್ಲಿ ವಸತಿ ವ್ಯವಸ್ಥೆಯನ್ನೂ ಕಲ್ಪಿಸಿರಲಿಲ್ಲ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.
ಮರುದಿನ ಪ್ರಯಾಣಿಕನೊಬ್ಬ ಸರಿಯಾದ ಸಮಯಕ್ಕೆ ವಿಮಾನಕ್ಕೆ ವರದಿ ಮಾಡದ ಕಾರಣ ಆತನಿಗಾಗಿ ಎರಡು ಗಂಟೆ ಹೆಚ್ಚುವರಿಯಾಗಿ ಕಾಯಲಾಯಿತು. ಇದರಿಂದಾಗಿ ಮುಂಬೈನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನದಲ್ಲಿ ಆಗಮಿಸುವ 12 ಪ್ರಯಾಣಿಕರಿಗೆ ಆ ವಿಮಾನ ಏರಲು ಸಾಧ್ಯವಾಗದೆ ಮುಂದಿನ ವಿಮಾನಕ್ಕಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ 12 ಗಂಟೆಗೂ ಹೆಚ್ಚು ಕಾಲ ಕಾಯುವಂತಾಗಿತ್ತು.
ವಿಮಾನದಲ್ಲಾದ ಕೆಟ್ಟ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಣಿಕರೊಬ್ಬರು, ಬಹ್ರೈನ್ನಲ್ಲಿ ಆದ ವಿಳಂಬದಿಂದಾಗಿ ಮಂಗಳೂರಿಗೆ ಬರಲು ಹಿಡಿಯಬೇಕಿದ್ದ ವಿಮಾನದ ಸಮಯಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ವಿಮಾನಯಾನ ಸಂಸ್ಥೆ ನಮಗೆ ಯಾವುದೇ ಆಯ್ಕೆ ನೀಡಲಿಲ್ಲ. ಹೀಗಾಗಿ 12 ಗಂಟೆಗಳಿಗೂ ಹೆಚ್ಚು ಕಾಲ ಮುಂಬೈ ನಿಲ್ದಾಣದಲ್ಲೇ ಕಾಯಬೇಕಾಗಿ ಬಂತು. ಮುಂಬೈನಲ್ಲಿ ನಮಗೆ ಆಹಾರ, ವಸತಿಯನ್ನೂ ನೀಡಲಿಲ್ಲ. ಇಂಡಿಗೋದಲ್ಲಿ ಕಳಪೆ ಸೇವೆಗೆ ವಿಷಾದವಾಗುತ್ತಿದೆ ಎಂದಿದ್ದಾರೆ.
ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರು ಇಂಡಿಗೋ ಏರ್ಲೈನ್ಸ್ , ಎಲ್ಲಾ ಸಂತ್ರಸ್ತ ಗ್ರಾಹಕರಿಗೆ ಊಟ, ವಸತಿ, ಸಹಾಯ ಮಾಡಲಾಗಿದೆ. ಗ್ರಾಹಕರಿಗೆ ಅವರ ಟಿಕೆಟ್ಗಳಿಗೆ ಸಂರ್ಪೂಣ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ. ತಪಾಸಣೆ ಬಳಿಕ ವಿಮಾನದ ಸೇವೆಯನ್ನು ಮರು ಆರಂಭಿಸಲಾಗಿದೆ. ಗ್ರಾಹಕರ ಸುರಕ್ಷತೆ ನಮಗೆ ಮುಖ್ಯ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ತಿಳಿಸಿದೆ.