ಬೆಂಗಳೂರು, ಮಾ 24 (DaijiworldNews/DB): ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಬೆಳಗ್ಗಿನ ಉಪಹಾರ ಸೇವಿಸಿದರು. ಈ ವೇಳೆ ಯಡಿಯೂರಪ್ಪ ಬದಲಾಗಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೂ ಅಮಿತ್ ಶಾ ಹೆಚ್ಚು ಒತ್ತು ನೀಡಿರುವುದು ವಿಶೇಷವಾಗಿತ್ತು.
ಶಾ ಅವರನ್ನು ಸ್ವಾಗತಿಸಲು ಬಿ.ಎಸ್. ಯಡಿಯೂರಪ್ಪ ಅವರು ಹೂವಿನ ಬೊಕೆ ಹಿಡಿದು ನಿಂತಿದ್ದರು. ಆದರೆ ಶಾ ಅವರು ಬೊಕೆಯನ್ನು ವಿಜಯೇಂದ್ರಗೆ ನೀಡುವಂತೆ ಹೇಳಿದರು. ಇದರಿಂದ ಯಡಿಯೂರಪ್ಪ ವಿಜಯೇಂದ್ರರಿಗೆ ಬೊಕೆ ನೀಡಿದರು. ಬಳಿಕ ಬೊಕೆಯನ್ನು ವಿಜಯೇಂದ್ರ ಅಮಿತ್ ಶಾಗೆ ಹಸ್ತಾಂತರಿಸಿ ಸ್ವಾಗತಿಸಿದರು. ಆ ಬಳಿಕ ಅಮಿತ್ ಶಾ ವಿಜಯೇಂದ್ರರ ಬೆನ್ನು ತಟ್ಟಿದರು. ಆ ಮೂಲಕ ಬಿಎಸ್ವೈ ಬದಲು ಅವರ ಪುತ್ರ ವಿಜಯೇಂದ್ರರಿಗೇ ಇಂದಿನ ಭೇಟಿಯಲ್ಲಿ ಅಮಿತ್ ಶಾ ಹೆಚ್ಚು ಒತ್ತು ನೀಡಿದ್ದು ವಿಶೇಷ ಹಾಗೂ ಕುತೂಹಲಕ್ಕೆ ಕಾರಣವಾಯಿತು.
ಉಪಾಹಾರ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ ಭಾಗವಹಿಸಿದ್ದರು. ಉಪಾಹಾರ ಸೇವನೆ ಬಳಿಕ ರಾಜ್ಯ ರಾಜಕೀಯದ ಕುರಿತು ಬಿಎಸ್ವೈ ಮತ್ತು ಅಮಿತ್ ಶಾ ಚರ್ಚೆ ನಡೆಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ, ಅಮಿತ್ ಶಾ ನನ್ನನ್ನು ಮಾತನಾಡಿಸಿರುವುದು ನನಗೆ ಸಂತಸ ತಂದಿದೆ. ಅಲ್ಲದೆ ಪಕ್ಷಕ್ಕಾಗಿ ಇನ್ನಷ್ಟು ತೊಡಗಿಸಿಕೊಳ್ಳಲು ಹೊಸ ಚೈತನ್ಯ ಸಿಕ್ಕಂತಾಗಿದೆ ಎಂದರು.
ರಾಜ್ಯ ರಾಜಕೀಯದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಾಯಕರೆಲ್ಲ ಚರ್ಚಿಸಿದ್ದಾರೆ. ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ರಾಜಕೀಯ ಹೊರತುಪಡಿಸಿ ಬಿಎಸ್ವೈ ಮತ್ತು ಶಾ ನಡುವೆ ಬೇರಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.