ನವದೆಹಲಿ, ಮಾ 24 (DaijiworldNews/DB): ಸತ್ಯಕ್ಕೆ ದೂರವಾದ ಕಪೋಲಕಲ್ಪಿತ ಆರೋಪ ಮಾಡುವ ಅಭ್ಯಾಸ ರಾಹುಲ್ ಗಾಂಧಿಯವರದ್ದು. ಕಾಂಗ್ರೆಸ್ಸಿಗರಿಗೆ ಅಹಂಕಾರ ಜಾಸ್ತಿ, ಸ್ವಲ್ಪ ತಿಳುವಳಿಕೆ ಇದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕುಹಕವಾಡಿದ್ದಾರೆ.
'ಮೋದಿ ಉಪನಾಮ' ಕುರಿತ ಟೀಕೆ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟವಾದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಸಂಘರ್ಷದ ನಡುವೆ ಸರಣಿ ಟ್ವೀಟ್ ಮಾಡಿದ ಅವರು, ಸುಳ್ಳು ಹೇಳುವುದು, ವೈಯಕ್ತಿಕವಾಗಿ ನಿಂದಿಸುವುದು ರಾಹುಲ್ ಗಾಂಧಿಯವರ ರಾಜಕೀಯದ ಅವಿಭಾಜ್ಯ ಅಂಗ. ಕಪೋಲಕಲ್ಪಿತ ಆರೋಪ ಮಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಆಪಾದಿಸಿದರು.
2019ರ ಚುನಾವಣೆಯಲ್ಲಿ ಅವರು ಅಮೇಥಿಯಲ್ಲಿ ಸೋಲನುಭವಿಸಿರುವುದು ಮತ್ತು ದೇಶದಲ್ಲೇ ಕಾಂಗ್ರೆಸ್ ಸೋತಿರುವುದಕ್ಕಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ನೀಡಲಿದ್ದಾರೆ ಎಂದವರು ತಿಳಿಸಿದರು.
ಕೀಳುಮಟ್ಟದ ರಾಜಕೀಯ ಭಾಷಣ ಮಾಡುವುದನ್ನು ಅವರು ಕಳೆದ ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ನ್ಯಾಯಾಲಯ, ಸಮುದಾಯದ ಸಲಹೆಗಳನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಒಬಿಸಿಗಳ ಭಾವನೆಗೂ ಧಕ್ಕೆ ತಂದಿದ್ದಾರೆ. ಇದಕ್ಕೆ ತಕ್ಕ ಪ್ರತಿಫಲ ಮುಂದಿನ ಚುನಾವಣೆಯಲ್ಲಿ ಅವರಿಗೆ ಸಿಗಲಿದೆ ಎಂದು ಕಿಡಿ ಕಾರಿದರು.