ಮಧ್ಯಪ್ರದೇಶ, ಮಾ 24 (DaijiworldNews/DB): ಪತಿ ಮತ್ತು ಆತನ ಕುಟುಂಬದ ಬಗ್ಗೆ ಪತ್ನಿ ಅಗೌರವ ತೋರುವುದು ಪತಿಯ ಮೇಲಿನ ಕ್ರೌರ್ಯಕ್ಕೆ ಸಮಾನ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಅತ್ತೆ ಮನೆ ತೊರೆದ ಪತ್ನಿ 2013ರಿಂದ ಸಕಾರಣವಿಲ್ಲದೆ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಕೆ ಪತಿಯೊಂದಿಗೆ ವಾಸಿಸಲು ಸಿದ್ದವಿಲ್ಲದಿರುವುದರಿಂದ ಇದು ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ವೀರೇಂದ್ರ ಸಿಂಗ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ದ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ರದ್ದುಗೊಳಿಸಿದೆ. ಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯವು ವಿಚ್ಚೇದನ ತೀರ್ಪು ನೀಡಿತ್ತು.
ಏನಿದು ಪ್ರಕರಣ?
ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿರುವ ವ್ಯಕ್ತಿ 2009ರಲ್ಲಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಯನ್ನು ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದಾಗಿ ಅವರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಆದೇಶದಂತೆ ಭೋಪಾಲ್ ಮೂಲದ ನ್ಯಾಯಾಲಯಕ್ಕೆ ಈ ಅರ್ಜಿಯನ್ನು ವರ್ಗಾಯಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಪತ್ನಿ ಪತಿ ಮತ್ತು ಆತನ ಕುಟುಂಬಕ್ಕೆ ಕಿರುಕುಳ ಹಾಗೂ ಚಿತ್ರಹಿಂಸೆ ನೀಡುತ್ತಿದ್ದಳು ಎಂಬುದಾಗಿ ತೋರಿಸುತ್ತದೆ.
ಪತಿಯೊಂದಿಗಿರಲು ಆಕೆ ಸಿದ್ದವಿಲ್ಲದ ಕಾರಣ ಆಕೆ ತನ್ನ ಪತಿಯ ಮನೆ ತೊರೆಯಲು ನೀಡಿದ ಕಾರಣಗಳು ತೃಪ್ತಿಕರವಾಗಿಲ್ಲ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.