ನವದೆಹಲಿ, ಮಾ 23 (DaijiworldNews/DB): ಇತರರನ್ನು ನಿಂದಿಸಲು ರಾಹುಲ್ ಗಾಂಧಿಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ವಿರೋಧ ಪಕ್ಷದ ಬಯಕೆಯೇ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂಬ ಹೇಳಿಕೆ ವಿಚಾರವಾಗಿ ರಾಹುಲ್ ಗಾಂಧಿ ದೋಷಿ ಎಂಬ ಸೂರತ್ ನ್ಯಾಯಾಲಯದ ನೀಡಿದ ತೀರ್ಪಿನ ವಿರುದ್ಧ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕಾನೂನು ತನ್ನ ಕೆಲಸವನ್ನು ತಾನು ಮಾಡುತ್ತದೆ. ಆದರೆ ವಿರೋಧ ಪಕ್ಷ ರಾಹುಲ್ ಗಾಂಧಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎನ್ನುತ್ತಿದೆ. ಇತರರನ್ನು ನಿಂದಿಸಲು ಅವರಿಗೆ ಸ್ವಾತಂತ್ರ್ಯ ಬೇಕಾಗಿರುವುದೇ ಎಂದು ಪ್ರಶ್ನಿಸಿದರು.
ಇನ್ನು ಈ ಪ್ರಕರಣದಲ್ಲಿ ಹಲವು ನ್ಯಾಯಾಧೀಶರನ್ನು ಬದಲಿಸಲಾಗಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಅವರ ಈ ಹೇಳಿಕೆ ತೋರಿಸುತ್ತದೆ ಎಂದು ಟೀಕಿಸಿದರು.
ಕೋರ್ಟ್ ತೀರ್ಪಿನಿಂದಾಗಿ ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಪೀಕರ್ ಓಂ ಬಿರ್ಲಾ ಅವರು ಇದನ್ನು ನಿರ್ಧರಿಸುತ್ತಾರೆ ಎಂದರು.