ನವದೆಹಲಿ, ಮಾ 23 (DaijiworldNews/DB): ಸತ್ಯ, ಅಹಿಂಸೆಯೇ ನನ್ನ ಧರ್ಮ. ಸತ್ಯವೇ ನನ್ನ ದೇವರು. ಅದನ್ನು ಪಡೆಯಲು ಅಹಿಂಸೆಯೇ ಮಾರ್ಗ ಎಂಬ ಮಹಾತ್ಮ ಗಾಂಧೀಜಿಯವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಕಳ್ಳರ ಉಪನಾಮ ಮೋದಿ ಎಂದು ಯಾಕೆ ಇರುತ್ತದೆ' ಎಂದು ಪ್ರಶ್ನಿಸಿದ್ದಕ್ಕೆ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ ಬಳಿಕ ರಾಹುಲ್ ಗಾಂಧಿಯವರು ಈ ಟ್ವೀಟ್ ಮಾಡಿದ್ದಾರೆ.
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ನಡೆದಿದ್ದ ಕಾಂಗ್ರೆಸ್ ರ್ಯಾಲಿ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ಎಲ್ಲಾ ಕಳ್ಳರ ಉಪನಾಮ ಮೋದಿ ಎಂದು ಯಾಕೆ ಇರುತ್ತದೆ ಎಂದು ಪ್ರಶ್ನಿಸಿದ್ದರು. ರಾಹುಲ್ ಹೇಳಿಕೆ ವಿರುದ್ದ ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ದೂರು ನೀಡಿದ್ದರು. ಈ ದೂರಿನ ವಿಚಾರಣೆಯನ್ನು ಸೂರತ್ ನ್ಯಾಯಾಲಯ ಗುರುವಾರ ನಡೆಸಿ ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿದೆ. ಬಳಿಕ ಜಾಮೀನು ಮಂಜೂರು ಮಾಡಿ ಒಂದು ತಿಂಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶಿಸಲಾಯಿತು.