ಉತ್ತರಪ್ರದೇಶ, ಮಾ 23 (DaijiworldNews/DB): ಯುವಕನೊಬ್ಬ ಪತ್ನಿಗೆ ಸೊಳ್ಳೆ ಕಚ್ಚುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಇನ್ನು ಯುವಕನ ದೂರಿಗೆ ಸ್ಪಂದಿಸಿರುವ ಪೊಲೀಸರು ಆತನಿಗೆ ಸೊಳ್ಳೆ ಕಿಲ್ಲರ್ ಬ್ಯಾಟ್ ನೀಡಿದ್ದಾರೆ.
ಸಂಭಾಲ್ ಜಿಲ್ಲೆಯ ಅಸದ್ ಖಾನ್ ಎಂಬಾತನೇ ದೂರು ನೀಡಿದವರು. ಮಾರ್ಚ್ 19ರ ರಾತ್ರಿ ಚಂದೌಸಿಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಸಂಭಾಲ್ ಜಿಲ್ಲೆಯ ಅಸದ್ ಖಾನ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯಲ್ಲಿ ವಿಪರೀತ ಸೊಳ್ಳೆಗಳಿದ್ದ ಕಾರಣ ನವಜಾತ ಶಿಶು ಮತ್ತು ತಾಯಿಗೆ ಸೊಳ್ಳೆ ಕಡಿಯುತ್ತಿತ್ತು. ಸೊಳ್ಳೆ ಕಡಿತದಿಂದ ಮಗು ಅಳುತ್ತಿದ್ದುದನ್ನು ನೋಡಿ ಆತಂಕಗೊಂಡ ಖಾನ್, ತನ್ನ ಪತ್ನಿ, ಮಗುವಿಗೆ ಸೊಳ್ಳೆ ಕಚ್ಚುತ್ತಿದೆ ಎಂಬುದಾಗಿ ಪೊಲೀಸರಿಗೆ ಟ್ವೀಟ್ ಮಾಡಿದ್ದಾನೆ.
ಡಯಲ್ 112 ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಯುವಕ ಟ್ವೀಟ್ ಮಾಡಿದ್ದಾನೆ. ಈ ದೂರಿಗೆ ಸ್ಪಂದಿಸಿದ ಸಂಭಾಲ್ ಜಿಲ್ಲೆಯ ಪೊಲೀಸರು ದೂರು ನೀಡಿದ ಯುವಕನನ್ನು ಠಾಣೆಗೆ ಕರೆಸಿ ಆತನಿಗೆ ಸೊಳ್ಳೆ ಕಿಲ್ಲರ್ ಬ್ಯಾಟ್ನ್ನು ನೀಡಿದ್ದಾರೆ. ಬಳಿಕ ಟ್ವೀಟ್ಗೆ ಪ್ರತಿಕ್ರಿಯಿಸಿದ ಪೊಲೀಸರು ಮಾಫಿಯಾದಿಂದ ಸೊಳ್ಳೆಯವರೆಗೆ ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.