ಗಿರಿದಿಹ್, ಮಾ 23 (DaijiworldNews/DB): ಮನೆಯೊಂದಕ್ಕೆ ದಾಳಿ ನಡೆಸಿದ ವೇಳೆ ನವಜಾತ ಶಿಶುವೊಂದು ಪೊಲೀಸರ ಬೂಟಿನಡಿ ಸಿಲುಕಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರು ಮಂದಿ ಪೊಲೀಸರ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಐವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪ್ರಕರಣವೊಂದರ ಸಂಬಂಧ ಮೃತ ಶಿಶುವಿನ ಅಜ್ಜ ಭೂಷಣ್ ಪಾಂಡೆ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಅವರ ಮನೆಗೆ ಪೊಲೀಸರು ತೆರಳಿದ್ದರು. ಈ ವೇಳೆ ನಾಲ್ಕು ದಿನದ ಗಂಡು ಶಿಶು ಪೊಲೀಸರ ಬೂಟಿನಡಿ ಸಿಲುಕಿ ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರು ಮಂದಿ ಪೊಲೀಸರ ವಿರುದ್ದ ಪ್ರಕರಣ ದಾಖಲಾಗಿದ್ದು, ಐವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದೇವೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಶೋಡಿಂಘಿ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಖಂಡಿಸಿದ್ದು, ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.
ಇನ್ನು ಪೊಲೀಸರು ಮಗುವನ್ನು ತುಳಿದಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪ್ರಾಥಮಿಕ ತನಿಖೆ ವೇಳೆ ಮಗುವಿನ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡು ಬಂದಿಲ್ಲ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸಿಬಂದಿ ತಪ್ಪಿತಸ್ಥರಾಗಿದ್ದಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮುಂಜಾನೆ 3.20ಕ್ಕೆ ನಮ್ಮ ಮನೆಗೆ ದಾಳಿ ನಡೆಸಿದ ಪೊಲೀಸರು ಬಾಗಿಲು ತೆರೆಯದಿದ್ದಾಗ ಬಲವಂತದಿಂದ ಬಾಗಿಲು ತೆರೆದಿದ್ದಾರೆ. ಈ ವೇಳೆ ನಾನು ಓಡಿ ಹೊರಗೋದೆ. ಮಹಿಳೆಯರೂ ಹೊರಗೆ ಧಾವಿಸಿ ಬಂದರು. ನಾಲ್ಕು ದಿನದ ನವಜಾತ ಶಿಶು ಅಲ್ಲೇ ಮಲಗಿತ್ತು. ಪೊಲೀಸರು ಮನೆಯೊಳಗೆ ಹುಡುಕುತ್ತಿದ್ದಾಗ ಶಿಶುವನ್ನು ಬೂಟಿನಿಂದ ತುಳಿದು ಕೊಂದಿದ್ದಾರೆ ಎಂದು ಭೂಷಣ್ ಪಾಂಡೆ ಎಂಬ ವ್ಯಕ್ತಿಯೊಬ್ಬರು ವೀಡಿಯೋ ಮೂಲಕ ಆರೋಪಿಸಿದ್ದರು ಎಂದು ವರದಿಯಾಗಿದೆ.