ಮುಂಬೈ, ಮಾ 23 (DaijiworldNews/DB): ದುಬೈ-ಮುಂಬೈ ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಿಬಂದಿ ಹಾಗೂ ಸಹ ಪ್ರಯಾಣಿಕರಿಗೆ ನಿಂದನೆ ಮಾಡಿದ ಆರೋಪದಲ್ಲಿ ಪ್ರಯಾಣಿಕರಿಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಮುಂಬೈನಲ್ಲಿ ಬುಧವಾರ ವಿಮಾನ ಇಳಿಯುತ್ತಿದ್ದಂತೆ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬಂಧಿಸಿದರು. ಇಬ್ಬರಿಗೂ ನ್ಯಾಯಾಲಯದಿಂದ ಜಾಮೀನು ದೊರೆತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಲ್ಘರ್ ನ ನಾಲಸೋಪಾರ ಹಾಗೂ ಕೊಲ್ಹಾಪುರ ಮೂಲದ ಪ್ರಯಾಣಿಕರು ಗಲ್ಫ್ನಲ್ಲಿ ಉದ್ಯೋಗಿಗಳಾಗಿದ್ದರು. ಮದ್ಯ ಸೇವಿಸಿ ವಿಮಾನದಲ್ಲಿ ಸಂಚರಿಸಿದ್ದ ಇಬ್ಬರು ವಿಮಾನದೊಳಗೇ ಸಂಭ್ರಮಿಸಿದ್ದರು. ವಿಪರೀತ ಗದ್ದಲದಿಂದ ಕಿರಿಕಿರಿಯಾದ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ಆಕ್ಷೇಪಿಸಿದ್ದರು. ಈ ವೇಳೆ ಇಬ್ಬರೂ ಕೂಡಾ ಸಹ ಪ್ರಯಾಣಿಕರನ್ನು ನಿಂದಿಸಲಾರಂಭಿಸಿದ್ದರಲ್ಲದೆ, ಮಧ್ಯಪ್ರವೇಶಿಸಿದ್ದ ವಿಮಾನ ಸಿಬಂದಿಗೂ ನಿಂದನೆಯ ಮಾತುಗಳನ್ನಾಡಿದರು. ಬಳಿಕ ಅವರಲ್ಲಿದ್ದ ಮದ್ಯದ ಬಾಟಲಿಗಳನ್ನು ಸಿಬಂದಿ ಕಸಿದುಕೊಂಡಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವುದಕ್ಕಾಗಿ) ಹಾಗೂ ವಿಮಾನ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.