ಚಿಕ್ಕಮಗಳೂರು, ಮಾ 23 (DaijiworldNews/DB): ನಕಲಿ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮದಲ್ಲಿ ನಡೆದಿದೆ. ನಕಲಿ ಮದ್ಯದಿಂದಾದ ಸಾವಿನಿಂದ ರೊಚ್ಚಿಗೆದ್ದ ಮೃತ ವ್ಯಕ್ತಿಯ ಕುಟುಂಬದ ಮಹಿಳೆಯರು ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಪುಟ್ಟೇಗೌಡ ಮೃತ ದುರ್ದೈವಿ. ಒಂದೇ ತಿಂಗಳಲ್ಲಿ ಒಂದೇ ಗ್ರಾಮದಲ್ಲಿ ನಕಲಿ ಮದ್ಯ ಸೇವನೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಕುಟುಂಬದ ಮಹಿಳೆಯರೊಂದಿಗೆ ಗ್ರಾಮಸ್ಥರೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಹಿತ್ಲೆಗುಳಿ ಗ್ರಾಮದ ರಸ್ತೆಯ ಮಧ್ಯದಲ್ಲಿ ಪುಟ್ಟೇಗೌಡರ ಶವವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು ಮದ್ಯದಂಗಡಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹಿತ್ಲಗುಳಿ ಗ್ರಾಮದ ಕೆಲವು ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಒಂದೇ ತಿಂಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೂರು ತಿಂಗಳಿನಿಂದ ಪೊಲೀಸರಿಗೆ ನಕಲಿ ಮದ್ಯ ಮಾರಾಟ ವಿಚಾರವಾಗಿ ದೂರು ನೀಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ನಕಲಿ ಮದ್ಯ ಮಾರಾಟ ಶಾಶ್ವತವಾಗಿ ಬಂದ್ ಆಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಯಪುರ ಠಾಣೆಯ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಪೊಲೀಸರ ವಿರುದ್ದವೇ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಅಲ್ಲದೆ ಪೊಲೀಸರ ಮುಂದೆಯೇ ನಕಲಿ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ಮುತ್ತಿಗೆ ಹಾಕಿದರು.