ಶ್ರೀನಗರ, ಮಾ 22 (DaijiworldNews/DB): ಭೂಕಂಪನದ ನಡುವೆಯೇ ಧೈರ್ಯಗುಂದದ ವೈದ್ಯರು ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿ ತಾಯಿ ಮತ್ತು ಶಿಶುವಿನ ಜೀವ ಉಳಿಸಿದ ಘಟನೆ ಶ್ರೀನಗರದ ಅನಂತ್ನಾಗ್ ಆಸ್ಪತ್ರೆಯಲ್ಲಿ ನಡೆದಿದೆ.
ಮಹಿಳೆ ಬಿಜ್ಬೆಹರಾದ ಎಸ್ಡಿಹೆಚ್ ಜಿಲ್ಲಾಸ್ಪತ್ರೆಗೆ ಮಂಗಳವಾರ ಸಂಜೆ ದಾಖಲಾಗಿದ್ದರು. ಮಹಿಳೆಯನ್ನು ಹೆರಿಗೆ ಕೋಣೆಗೆ ದಾಖಲಿಸಿ ಹೆರಿಗೆ ನಡೆಸುತ್ತಿರುವಾಗ ಭೂಮಿ ಕಂಪಿಸಿದೆ. ಆದರೆ ಧೈರ್ಯಗುಂದದ ವೈದ್ಯರು ಲೋವರ್ ಸೆಗ್ಮೆಂಟ್ ಸಿಸೇರಿಯನ್ ಮೂಲಕ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಆ ಮೂಲಕ ತಾಯಿ ಮತ್ತು ಶಿಶುವಿನ ಜೀವ ಕಾಪಾಡಿದ್ದಾರೆ.
ಭೂಕಂಪನದ ನಡುವೆಯೇ ಹೆರಿಗೆ ಮಾಡಿಸಿದ ವೈದ್ಯರು ಮತ್ತು ದಾದಿಯರ ಸಾಹಸದ ಬಗ್ಗೆ ಟ್ವೀಟ್ ಮಾಡಿರುವ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ, ಹೆರಿಗೆ ಮಾಡಿಸಿದ ವೈದ್ಯರನ್ನು ಅಭಿನಂದಿಸಿದ್ದಾರೆ. ಇನ್ನು ಈ ವೀಡಿಯೋ ವೈರಲ್ ಆಗಿದ್ದು, ಹೆರಿಗೆ ಸಂದರ್ಭದಲ್ಲಿ ಭೂಮಿ ಕಂಪಿಸಿರುವುದು ದಾಖಲಾಗಿದೆ.
ಅಫ್ಘಾನಿಸ್ತಾನದ ಹಿಂಡು ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಅನಂತ್ನಾಗ್ ಕಣಿವೆಯಲ್ಲಿಯೂ ಭೂಮಿ ಕಂಪಿಸಿದೆ. ಭೂಕಂಪನಕ್ಕೆ ಹೆದರಿದ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ.