ಶಿವಮೊಗ್ಗ, ಮಾ 22 (DaijiworldNews/DB): ನಿಮ್ಮ ಪುತ್ರ ಇನ್ನೂ ಸಣ್ಣವನಿದ್ದಾನೆ. ಸದ್ಯ ನಾವು ಕ್ಯೂನಲ್ಲಿದ್ದು ನಮಗೆ ಟಿಕೆಟ್ ಕೊಡಿಸಲಿ. ಮಗನಿಗೆ ಆನಂತರ ನೀಡಿದರಾಯಿತು ಎಂದು ಟಿಕೆಟ್ ಆಕಾಂಕ್ಷಿ ಆಯನೂರು ಮಂಜುನಾಥ್ ಅವರು ಕೆ.ಎಸ್. ಈಶ್ವರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ನನಗೆ ಟಿಕೆಟ್ ನೀಡುವುದು ಅಸಾಧ್ಯವಾದರೆ ಮಗನಿಗೆ ನೀಡಿ ಎಂಬುದಾಗಿ ಈಶ್ವರಪ್ಪ ಹೇಳಿದ್ದಾರೆ. ಆದರೆ ಅವರ ಮಗ ಇನ್ನೂ ಚಿಕ್ಕವ. ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ನಾನೂ ಸೇರಿದಂತೆ ಹಲವರಿದ್ದೇವೆ. ಮಗನಿಗೆ ಆಮೇಲೆ ಟಿಕೆಟ್ ನೀಡಲಿ. ಮೊದಲು ನಮಗೆ ನೀಡಲಿ ಎಂದರು.
ಈಶ್ವರಪ್ಪ ಮತ್ತು ಬಿಜೆಪಿ ನಡುವೆ ನಾನು ಉರಿಗೌಡ, ನಂಜೇಗೌಡ ಅಲ್ಲ, ನಾನು ಆಯನೂರ್ ಮಂಜುನಾಥ್. ಹೀಗಾಗಿ ನನ್ನ ಮಾತಿನಿಂದ ಯಾರಿಗೆ ನಂಜಾಗುತ್ತದೆಯೋ ಅವರನ್ನು ನಂಜೇಗೌಡ, ಉರಿ ಬೀಳುವವರನ್ನು ಉರಿಗೌಡ ಎಂದು ಕರೆಯಿರಿ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ಒಬ್ಬ ಪ್ರಬುದ್ದ ರಾಜಕಾರಣಿಯಾಗಿರುವುದರಿಂದ ಜವಾಬ್ದಾರಿಯಿಂದ ಮಾತನಾಡಬೇಕು. ಬಿಜೆಪಿಯ ಇಮೇಜ್ ಹಾಳು ಮಾಡುವಂತಹ ಮಾತು ಯಾರೇ ಆಡಿದರೂ ನಾವು ಸ್ವೀಕರಿಸುವುದಿಲ್ಲ ಎಂದೂ ಇದೇ ವೇಳೆ ತಿಳಿಸಿದರು.
ನಿಷ್ಠುರವಾಗಿ ಮಾತನಾಡಿದ ಮಾತ್ರಕ್ಕೆ ನಾನು ಪಕ್ಷ ಬಿಡುತ್ತೇನೆಂದು ನಿರ್ಧರಿಸುವುದು ತಪ್ಪು. ಶಿವಮೊಗ್ಗ ಕ್ಷೇತ್ರದಿಂದ ನನಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದರು.