ನವದೆಹಲಿ, ಮಾ 22 (DaijiworldNews/DB): ದೆಹಲಿ ಸರ್ಕಾರವು ದೆಹಲಿ ವಿಧಾನಸಭೆಯಲ್ಲಿಂದು 78,800 ಕೋಟಿ ರೂ.ಗಳ ಬಜೆಟ್ ಮಂಡಿಸಿದೆ.
ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಮೂಲಸೌಕರ್ಯಕ್ಕೆ 22,000, ಶಿಕ್ಷಣಕ್ಕೆ 16 ಸಾವಿರ ಕೋಟಿ, ಆರೋಗ್ಯಕ್ಕೆ 9 ಸಾವಿರ ಕೋಟಿ, ಜಾಹೀರಾತುಗಳಿಗೆ 550 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ ಎಂದು ಗೆಹ್ಲೋತ್ ಅವರು ತಿಳಿಸಿದ್ದಾರೆ.
ಮಂಗಳವಾರವೇ ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವಿನ ಆಂತರಿಕ ಕಲಹದಿಂದಾಗಿ ಬಜೆಟ್ ಮಂಡನೆಯನ್ನು ತಡೆ ಹಿಡಿಯಲಾಗಿತ್ತು. ಆ ಬಳಿಕ ಕೇಂದ್ರ ಗೃಹ ಸಚಿವಾಲಯವು ಬಜೆಟ್ ಮಂಡನೆಗೆ ದೆಹಲಿ ಸರ್ಕಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಬಜೆಟ್ ಮಂಡನೆ ಮಾಡಲಾಯಿತು.