ಬೆಂಗಳೂರು, ಮಾ 22 (DaijiworldNews/DB): ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್ನಲ್ಲೇ ತಂಡ ಸಿದ್ದವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವೊಂದರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲ ಎಂಬುದು ದುರದೃಷ್ಟಕರ. ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಆದರೆ ಇಂತಹ ಪರಿಸ್ಥಿತಿಗೆ ಕಾರಣ ಅವರದೇ ಪಕ್ಷದವರು. ಅವರು ಎಲ್ಲೇ ಸ್ಪರ್ಧಿಸಿದರೂ ಅವರನ್ನು ಸೋಲಿಸಲು ಕಾಂಗ್ರೆಸ್ನೊಳಗೇ ತಂಡ ಸಿದ್ದವಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಮಾರ್ಚ್ 26ರಂದು ಬಿಡುಗಡೆಯಾಗಲಿದೆ. 123 ಸೀಟ್ ಗೆಲುವಿನ ಗುರಿಯೊಂದಿಗೆ ಜನರ ಬಳಿಗೆ ನಾವು ಹೋಗುತ್ತಿದ್ದೇವೆ. ಸುಮಾರು 16 ಕ್ಷೇತ್ರಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಜೆಡಿಎಸ್ಗೆ ಯಾವುದೇ ತೊಂದರೆ ಇಲ್ಲ ಎಂದವರು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಟಿಕೆಟ್ ಘೋಷಣೆಯಾದ ಬಳಿಕ ಈ 16 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ ಆಕಾಂಕ್ಷಿಗಳು ಬರಲೂಬಹುದು. ಕಾದು ನೋಡೋಣ ಎಂದು ಇದೇ ವೇಳೆ ಎಚ್ಡಿಕೆ ಹೊಸ ಬಾಂಬ್ ಸಿಡಿಸಿದರು.