ಶಿವಮೊಗ್ಗ, ಮಾ 21 (DaijiworldNews/MS): ಶಿವಮೊಗ್ಗ ನಗರ ಕ್ಷೇತ್ರದಿಂದ ಈ ಬಾರಿ ತಂದೆ ಕೆ.ಎಸ್.ಈಶ್ವರಪ್ಪ ಅವರೇ ಸ್ಪರ್ಧೆ ಮಾಡುತ್ತಾರೆ. ನಾನು ಸ್ಪರ್ಧಿಸಲ್ಲ ಎಂದು ಕೆ.ಎಸ್ ಈಶ್ವರಪ್ಪ ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾರೇ ಏನೇ ಹೇಳಿದರೂ, ವಿರೋಧಿಸಿದ್ರೂ ನನ್ನ ತಂದೆಗೆ ಬಿಜೆಪಿ ಟಿಕೆಟ್ ಸಿಗುತ್ತದೆ. ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರ ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಕೇಳಿಬಂದಿತ್ತು. ಆದಾದ ಬಳಿಕ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಹೆಸರು ಪ್ರಸ್ತಾಪ ಆಗಿತ್ತು. ನಾನು ಕೂಡ ತಂದೆ ಈಶ್ವರಪ್ಪ ಅವರಲ್ಲಿ ಸ್ಪರ್ಧಿಸುವ ಕುರಿತು ಪ್ರಸ್ತಾಪಿಸಿದ್ದೆ ಆದರೆ ನಾನು ಎಲ್ಲಿಯವರೆಗೆ ಚುನಾಯಿತ ಪ್ರತಿನಿಧಿಯಾಗಿ ರಾಜಕಾರಣದಲ್ಲಿ ಇರುತ್ತೇನೋ ಅಲ್ಲಿಯವರೆಗೂ ಸ್ಪರ್ಧೆ ಬೇಡವೆಂದು ಹೇಳಿದ್ದು ಅವರ ಮಾತಿನಿಂದ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದೆ ಎಂದು ಹೇಳಿದ್ದಾರೆ.
ನನ್ನ ತಂದೆಗೆ 76 ವರ್ಷ ವಯಸ್ಸಾಗಿದ್ದು, ಬಿಜೆಪಿ ಟಿಕೆಟ್ ಕೊಡ್ತಾರೋ, ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅವರಿಗೆ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.