ನವದೆಹಲಿ, ಮಾ 22 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿರಿಯ ಸಹೋದರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಬಣ್ಣಿಸಿದ್ದಾರೆ.
ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಹಿರಿಯ ಸಹೋದರ. ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಯಾವುದೇ ಸಂಘರ್ಷಗಳು ಇರದೇ ಇರುತ್ತಿದ್ದರೆ ದೆಹಲಿ ಹೆಚ್ಚಿನ ಅಭಿವೃದ್ದಿ ಕಾಣುತ್ತಿತ್ತು. ನಮಗೆ ಗಲಾಟೆ, ಸಂಘರ್ಷಗಳು ಬೇಕಿಲ್ಲ, ಅಭಿವೃದ್ದಿಯೊಂದೇ ಸಾಕು. ಪ್ರಧಾನಿಯೊಂದಿಗೆ ಕೆಲಸ ಮಾಡಲು ನಾವು ಬಯಸುತ್ತೇವೆ ಎಂದರು.
ದೆಹಲಿ ಜನರನ್ನು ಗೆದ್ದರಷ್ಟೇ ದೆಹಲಿಯನ್ನು ಗೆಲ್ಲಲು ಸಾಧ್ಯ ಎಂಬ ಮಂತ್ರವನ್ನು ನಾನು ಪ್ರಧಾನಿ ಮೋದಿಯವರಿಗೆ ಹೇಳಿಕೊಡುತ್ತೇನೆ. ನಾನು ಕಿರಿಯ ಸಹೋದರ, ನೀವು ಹಿರಿಯ ಸಹೋದರ. ಈ ಕಿರಿಯ ಸಹೋದರನ ಹೃದಯ ಗೆಲ್ಲಬೇಕೆಂದಿದ್ದರೆ ಮೊದಲು ಆತನನ್ನು ಪ್ರೀತಿಸಿ. ಬೆಂಬಲಿಸಿ ಎಂದು ಇದೇ ವೇಳೆ ಮನವಿ ಮಾಡಿದರು.
ದೆಹಲಿ ಸರ್ಕಾರಕ್ಕೆ ಬಜೆಟ್ ಮಂಡನೆಗೆ ಅನುಮೋದನೆ ನೀಡಿ ಗೃಹ ಸಚಿವಾಲಯದಿಂದ ಆದೇಶ ಬಂದ ಬೆನ್ನಲ್ಲೇ ಕೇಜ್ರೀವಾಲ್ ಅವರು ಈ ಮಾತುಗಳನ್ನಾಡಿದ್ದಾರೆ.