ನವದೆಹಲಿ, ಮಾ 22 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ವಿರುದ್ದ ದೆಹಲಿ ನಗರಾದ್ಯಂತ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ 100ಕ್ಕೂ ಎಫ್ಐಆರ್ ದಾಖಲಾಗಿದೆ.
ಪ್ರಿಂಟಿಂಗ್ ಪ್ರೆಸ್ ಆಕ್ಟ್ & ಡಿಫೇಸ್ಮೆಂಟ್ ಆಫ್ ಪ್ರಾಪರ್ಟಿ ಆಕ್ಟ್ನಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವ್ಯಾನ್ವೊಂದು ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರಟಿದ್ದು, ಕೂಡಲೇ ಆ ವ್ಯಾನ್ನ್ನು ಅಡ್ಡಗಟ್ಟಿ ಕೆಲವು ಪೋಸ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಮಂಗಳವಾರ ನಗರಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 2 ಸಾವಿರ ಪೋಸ್ಟರ್ಗಳನ್ನು ವಶಪಡಿಸಿಕೊಂಡಿದ್ದಾರೆ. 'ಮೋದಿ ಹಠಾವೋ, ದೇಶ್ ಬಚಾವೋ ಘೋಷಣೆಯನ್ನು ಪೋಸ್ಟರ್ಗಳಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
50 ಸಾವಿರ ಪೋಸ್ಟರ್ಗಳ ಮುದ್ರಣಕ್ಕೆ ಆದೇಶ ಬಂದಿದೆ ಎಂದು ಬಂಧಿತ ಪ್ರಿಂಟಿಂಗ್ ಪ್ರೆಸ್ ಮಾಲಕ ಪೊಲೀಸರೆದುರು ಹೇಳಿಕೊಂಡಿದ್ದಾರೆ. ಪೋಸ್ಟರ್ಗಳನ್ನು ಎಎಪಿ ಕಚೇರಿಗೆ ತಲುಪಿಸುವಂತೆ ನಮಗೆ ಸೂಚಿಸಿದ ಮೇರೆಗೆ ಅದನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ವ್ಯಾನ್ ಚಾಲಕ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ.
ಇನ್ನು ಆರು ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಎಪಿ, ಪೋಸ್ಟರ್ಗಳಲ್ಲಿ ಆಕ್ಷೇಪಾರ್ಹ ಎನಿಸುವಂತಹ ಯಾವ ಬರಹ ಇದೆ ಎಂದು ಪ್ರಶ್ನಿಸಿದೆ. ಹಲವರ ಮೇಲೆ ಎಫ್ಐಆರ್ ದಾಖಲಿಸಿರುವುದು ಮತ್ತು ಬಂಧಿಸಿರುವುದು ಮೋದಿ ಸರ್ಕಾರದ ಸರ್ವಾಧಿಕಾರ ಎಲ್ಲಿವರೆಗೆ ತಲುಪಿದೆ ಎಂಬುದನ್ನು ಸೂಚಿಸುತ್ತದೆ ಎಂದು ಎಎಪಿ ಹರಿಹಾಯ್ದಿದೆ.