ಚಿಕ್ಕಮಗಳೂರು, ಮಾ 22 (DaijiworldNews/DB): ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಪ್ತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಮತದಾರರಿಗೆ ಹಂಚಲೆಂದು ತಂದಿರಿಸಿದ್ದ ಕುಕ್ಕರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಸಕ ಟಿ.ಡಿ. ರಾಜೇಗೌಡ ಆಪ್ತ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸತೀಶ್ ಅವರ ಜಯಪುರ ಬಳಿಯ ತೆಂಗಿನಮನೆ ಗ್ರಾಮದಲ್ಲಿರುವ ಮನೆಗೆ ಕೊಪ್ಪ ತಾಲೂಕಿನ ಜಯಪುರ ಠಾಣಾ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಈ ವೇಳೆ ಮತದಾರರಿಗೆ ವಿತರಿಸಲು ತಂದಿದ್ದ 500ಕ್ಕೂ ಹೆಚ್ಚು ಕುಕ್ಕರ್ಗಳು ಮನೆಯಲ್ಲಿ ಪತ್ತೆಯಾಗಿದ್ದು, ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತದಾರರನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಟಿ.ಡಿ. ರಾಜೇಗೌಡ ಬೆಂಬಲಿಗರು ಕಳೆದೊಂದು ವಾರದಿಂದ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚುವುದರಲ್ಲಿ ತೊಡಗಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫೋಟೊ ವೈರಲ್ ಆದಂತೆ ಎಚ್ಚೆತ್ತುಕೊಂಡ ಪೊಲೀಸರು ಶಾಸಕರ ಆಪ್ತನ ಮನೆಗೆ ದಾಳಿ ನಡೆಸಿ ಕುಕ್ಕರ್ ವಶಪಡಿಸಿಕೊಂಡಿದ್ದಾರೆ. ಕುಕ್ಕರ್ ಬಾಕ್ಸ್ ಮೇಲೆ ಶಾಸಕ ಟಿ.ಡಿ. ರಾಜೇಗೌಡ ಫೋಟೋ ಹಾಕಲಾಗಿದ್ದು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಎಂದು ಬರೆಯಲಾಗಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಕುಕ್ಕರ್ಗಳನ್ನು ಅವರು ಮತದಾರರಿಗೆ ಹಂಚಿದ್ದರು ಎಂದು ವರದಿಯಾಗಿದೆ.