ಬೆಂಗಳೂರು, ಮಾ 21 (DaijiworldNews/MS):"ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷಕ್ಕೆ ದಲಿತರ ನೆನಪಾಗಿದೆ. ದಲಿತ ನಾಯಕರನ್ನು ಸೋಲಿಸಿದ ಸಿದ್ದರಾಮಯ್ಯ ಅವರೇ ನೀವು ಚುನಾವಣೆಯಲ್ಲಿ ಯಾವ ಮುಖವಿಟ್ಟುಕೊಂಡು ದಲಿತರಲ್ಲಿ ಓಟು ಕೇಳುತ್ತೀರಿ" ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ದಲಿತರಿಗೆ ಭರವಸೆಯ ಬೆಳಕನ್ನು ಹಿಂದೆಯೂ ನೀಡಿದೆ, ಮುಂದೆಯೂ ನೀಡಲಿದೆ. ಎಂಬ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, "ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷಕ್ಕೆ ದಲಿತರ ನೆನಪಾಗಿದೆ. ದಲಿತರು ಈ ಭಾರಿ ನಿಮ್ಮನ್ನು ಸೋಲಿಸುತ್ತಾರೆ ಎಂಬ ಸಮೀಕ್ಷೆ ಆಧರಿಸಿ ಕೋಲಾರ ಬಿಟ್ಟು ಓಡಿದ ಸಿದ್ದರಾಮಯ್ಯ ಅವರೇ, ದಲಿತ ನಾಯಕರನ್ನು ಸೋಲಿಸಿದ ನೀವು ಯಾವ ಮುಖವಿಟ್ಟುಕೊಂಡು ದಲಿತರಲ್ಲಿ ಓಟು ಕೇಳುತ್ತೀರಿ" ಎಂದು ಬಿಜೆಪಿ ಪ್ರಶ್ನಿಸಿದೆ.
"ದಲಿತ ವಿರೋಧಿ ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿ, ಅವರ ಶವ ಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಂಚತೀರ್ಥ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರಾದ ಡಾ.ಜಿ ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಶ್ರೀನಿವಾಸ್ ಪ್ರಸಾದ್, ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಿತ್ತು. ಅಖಂಡ ಶ್ರೀನಿವಾಸಮೂರ್ತಿ ಮೇಲೆ ದಾಳಿ ನಡೆದಾಗಲು, ತುಷ್ಟೀಕರಣದ ಕಾರಣದಿಂದ ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ" ಎಂದು ಬಿಜೆಪಿ ಟೀಕಿಸಿದೆ.
"ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷವು ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ನಿರಾಕರಣೆ ಮಾಡಿತ್ತು. ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಿಸಿದ್ದು, ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದು ನಮ್ಮ ಸರ್ಕಾರ" ಎಂದು ಬಿಜೆಪಿ ಕಿಡಿಕಾರಿದೆ.