ಲಕ್ನೋ, ಮಾ 22 (DaijiworldNews/DB): ರಾಜ್ಯದ 500ಕ್ಕೂ ಅಧಿಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
71ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಚಾಂಪಿಯನ್ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ತಾವು ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ಈ ತಿಂಗಳಿಗೆ ಎರಡನೇ ವರ್ಷ ಪೂರೈಸುತ್ತಿದೆ. ಕ್ರೀಡಾ ಕ್ಷೇತ್ರಕ್ಕೆ ಸರ್ಕಾರ ಮಹತ್ವದ ಕೊಡುಗೆಗಳನ್ನು ನೀಡಲು ನಿರ್ಧರಿಸಿದೆ. ರಾಜ್ಯದ 500ಕ್ಕೂ ಅಧಿಕ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವುದು ಈ ಕೊಡುಗೆಗಳಲ್ಲಿ ಒಂದು ಎಂದರು.
ಪೊಲೀಸ್ ಇಲಾಖೆ ಹಾಗೂ ಇತರೇ ಸರ್ಕಾರಿ ಇಲಾಖೆಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಪ್ರತಿ ಪಂಚಾಯತ್ನಲ್ಲಿ ಕ್ರೀಡಾ ಮೈದಾನ, ಜಿಲ್ಲೆಗಳಲ್ಲಿ ಕ್ರೀಡಾಂಗಣ, ಬ್ಲಾಕ್ಗಳಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣದ ಉದ್ದೇಶ ಸರ್ಕಾರದ ಮುಂದಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ. ಕ್ರೀಡಾ ಸಂಸ್ಕೃತಿ ಔನತ್ಯಕ್ಕೇರಿದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಹೆಚ್ಚೆಚ್ಚು ಪದಕ ಗೆಲ್ಲುತ್ತಿರುವುದು ಈ ದೇಶದ ಕ್ರೀಡಾ ಸಾಧನೆಯ ಮೈಲುಗಲ್ಲು ಎಂದು ಪ್ರೋತ್ಸಾಹಿಸಿದರು.