ಬೆಂಗಳೂರು, ಮಾ 21 (DaijiworldNews/SM): ಕರ್ನಾಟಕಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆ ಆಪ್ ಕೂಡ ಚುನಾವಣಾ ಕಸರತ್ತು ಆರಂಭಿಸಿದೆ. ಬಿಜೆಪಿಯು ವಿಜಯಸಂಕಲ್ಪ ಯಾತ್ರೆ (Vijaya Sankalp Yatra) ಮೂಲಕ ರಾಜ್ಯ ಪರ್ಯಟಣೆ ನಡೆಸುತ್ತಿದೆ. ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ ಅಂತ ಹೇಳಿಕೊಂಡು ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಇದು ಇತರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಾರ್ಚ್ 24 ಮತ್ತು 26ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ವಿಧಾನಸೌಧದಲ್ಲಿ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ವಿಚಾರವನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಸವಣ್ಣನ ವಿಚಾರಧಾರೆಗೆ ವಿರುದ್ಧವಾಗಿರುವವರು ಪ್ರತಿಮೆ ಲೋಕಾರ್ಪಣೆ ಮಾಡಿದರೆ ಯಾವ ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಕರ್ನಾಟಕದ ಹಿತವನ್ನು ಯಾವಾಗ ಕಾಪಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಪ್ರಶ್ನಿಸಿದ ಸಿದ್ದರಾಮಯ್ಯ, ಜಗಜ್ಯೋತಿ ಬಸವೇಶ್ವರರು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಬಿಜೆಪಿಯವರು ಬಸವಣ್ಣನ ವಿಚಾರಧಾರೆಗೆ ವಿರುದ್ಧವಾಗಿದ್ದಾರೆ. ಇಂತಹವರು ಬಸವಣ್ಣನ ಪ್ರತಿಮೆ ಉದ್ಘಾಟನೆ ಮಾಡಿದರೆ ಯಾವ ಸಂದೇಶ ಹೋಗುತ್ತದೆ? ಚುನಾವಣೆ ಸಮೀಪದಲ್ಲಿ ರಾಜಕೀಯದ ಕಾರಣಕ್ಕಾಗಿ ಶಾ ಅವರು ಬರುತ್ತಿದ್ದಾರೆ. ಮತಗಳಿಗಾಗಿ, ಅಧಿಕಾರಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.