ಬೆಂಗಳೂರು, ಮಾ 21 (DaijiworldNews/SM): ಮಾಜಿ ಸಿಎಂ ಸಿದ್ದರಾಮಯ್ಯ ಅವರದು ಈ ಬಾರಿಯ ಕೊನೇ ವಿಧಾನಸಭೆ ಚುನಾವಣೆ. ಈ ಕಾರಣದಿಂದಾಗಿ ಕ್ಷೇತ್ರ ಆಯ್ಕೆಯದ್ದೇ ಗೊಂದಲ. ಸ್ಪರ್ಧೆಗಾಗಿ ಹಲವು ಕ್ಷೇತ್ರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದೆ. ಕ್ಷೇತ್ರ ಆಯ್ಕೆ ವಿಚಾರದಲ್ಲಿ ಗೊಂದಲವೂ ಕೂಡ ಮುಂದುವರೆದಿದೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆರಂಭದಲ್ಲಿಯೇ ಹೇಳಿದ್ದರು. ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೋಗಿ ಅಲ್ಲಿ ಘೋಷಣೆ ಮಾಡಿ ಸರ್ವೆ ಮಾಡಿಸಿ ಅಲ್ಲಿನ ಚುನಾವಣಾ ವಾತಾವರಣ ತಮಗೆ ಅನುಕೂಲವಾಗಿಲ್ಲ ಎಂದು ಹಿಂದೆ ಸರಿಯುತ್ತಿದ್ದಾರೆ. ಇದೀಗ ತಮ್ಮ ಸ್ಪರ್ಧೆ ಹೈಕಮಾಂಡ್ ಗೆ ಬಿಟ್ಟ ವಿಚಾರ, ಹೈಕಮಾಂಡ್ ಹೇಳಿದಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಇಂದು ಬೆಂಗಳೂರಿನ ಅವರ ಸರ್ಕಾರಿ ನಿವಾಸದ ಮನೆ ಮುಂದೆ ರಾಜಕೀಯ ಹೈಡ್ರಾಮಾ ನಡೆದಿದೆ. ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಭಿಮಾನಿ ಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶರ್ಟ್ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿ ಹೊಡೆದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದು ವಿಚಿತ್ರವಾಗಿತ್ತು. ಸಿದ್ದರಾಮಯ್ಯ ನಿವಾಸದ ಮುಂದೆ ಕಾರ್ಯಕರ್ತರು ಜಮಾಯಿಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಎಂದಿಗೂ ಹೇಳಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.