ನವದೆಹಲಿ, ಮಾ 21 (DaijiworldNews/DB): ಸಂಸತ್ತಿನಲ್ಲಿ ಮಾತನಾಡುವುದನ್ನು ಯಾರಿಂದಲೂ ತಡೆಯುವುದು ಅಸಾಧ್ಯ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ಮಾತುಕತೆಗೆ ಸಿದ್ದವಿದ್ದರೂ, ಪ್ರತಿಪಕ್ಷಗಳು ಬರುತ್ತಿಲ್ಲ. ಸರ್ಕಾರ ಯಾರೊಂದಿಗೆ ಮಾತನಾಡಬೇಕೆಂದಿದೆಯೋ ಅವರು ಮಾಧ್ಯಮಗಳ ಮುಂದೆ ಕುಳಿತು ಮಾತನಾಡುತ್ತಿದ್ದಾರೆ. ಬಳಿಕ ವಾಕ್ ಸ್ವಾತಂತ್ರ್ಯ ಬೇಕೆಂದು ಸಂಸತ್ತಿನಲ್ಲಿ ಘೋಷಣೆ ಕೂಗುತ್ತಾರೆ. ಆದರೆ ಸಂಸತ್ತಿನಲ್ಲಿ ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದರು.
ಸಂಸತ್ತಿನ ಕಲಾಪದಲ್ಲಿ ಉಂಟಾಗಿರುವ ವೈರುಧ್ಯಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಬಹುದು. ಆದರೆ ವಿಪಕ್ಷಗಳು ಮಾತುಕತೆಗೆ ಬರದಿರುವುದರಿಂದ ಬಿಕ್ಕುಟ್ಟು ಶಮನವಾಗುತ್ತಿಲ್ಲ. ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇವೆ. ಅವರೂ ಅದೇ ರೀತಿ ಮಾಡಬೇಕು ಎಂದವರು ತಿಳಿಸಿದರು.
ವಿದೇಶದಲ್ಲಿ ಹೋಗಿ ಭಾರತದ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೂ ನಿರಾಕರಿಸಿದ್ದರು ಎಂದು ಇದೇ ವೇಳೆ ಅಮಿತ್ ಶಾ ಸ್ಮರಿಸಿದರು.