ಹೊಸದೆಹಲಿ, ಮಾ. 20(AZM): ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ಸಾಮಾಜಿಕ ಜಾಲಾತಾಣದಲ್ಲಿ ನಿಂದನಾತ್ಮಕ ಸಂದೇಶ ರವಾನೆ ಹಾಗೂ ಬೆದರಿಕೆ ಕರೆ ನೀಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸ್ನ ಸೈಬರ್ ಸೆಲ್ ಇಂದು ಬಂಧಿಸಿದೆ.
ಅನಾಮಿಕ ವ್ಯಕ್ತಿಗಳಿಂದ ಬೆದರಿಕೆ ಕರೆ ಹಾಗೂ ಮಾನಹಾನಿಕರ ಸಂದೇಶಗಳನ್ನು ಸ್ವೀಕರಿಸಿದ ಬರ್ಖಾ ದತ್ ಅವರು ಫೆಬ್ರವರಿ 21ರಂದು ದಿಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಪ್ರಕಾರ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ದಿಲ್ಲಿಯ ರಾಜೀವ್ ಶರ್ಮಾ (23), ಹೇಮರಾಜ್ ಕುಮಾರ್ (31), ಆದಿತ್ಯ ಕುಮಾರ್ (34) ಹಾಗೂ ಸೂರತ್ನ ಶಬ್ಬೀರ್ ಗುರ್ಫಾನ್ ಪಿಂಜಾರಿ (45) ಎಂದು ಗುರುತಿಸಲಾಗಿದೆ.
ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಹಲ್ಲೆಯ ಗುರಿಯಾದ ಕಾಶ್ಮೀರಿಗಳಿಗೆ ನೆರವು ನೀಡಲು ದತ್ ಅವರು ಟ್ವಿಟರ್ನಲ್ಲಿ, ಸಹಾಯ ಕೋರುವವರು ಆನ್ಲೈನ್ನಲ್ಲಿ ಲಭ್ಯವಿರುವ ನನ್ನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬೆದರಿಕೆ ಕರೆ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಸ್ವೀಕರಿಸಿದ್ದರು.
ಪ್ರಕರಣದ ಬಗ್ಗೆ ತ್ವರಿತ ವಿಚಾರಣೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ದಿಲ್ಲಿ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದೆ.