ಬೆಳಗಾವಿ, ಮಾ 21 (DaijiworldNews/DB): ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಇದೀಗ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾನೆ.
ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್ಲೈನ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಕರೆ ಮಾಡಿದಾತ 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ವರದಿಯಾಗಿದೆ.
ಕಳೆದ ಜನವರಿಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬಾತನ ಹೆಸರಿನಲ್ಲಿ ನಿತಿನ್ ಗಡ್ಕರಿಯವರ ನಾಗಪುರದ ಕಚೇರಿಗೆ ಇದೇ ರೀತಿ ಬೆದರಿಕೆ ಕರೆ ಬಂದಿತ್ತು. ಇದೀಗ ಆತನ ಹೆಸರಿನಲ್ಲಿಯೇ ಅದೇ ಜೈಲಿನಿಂದ ಮತ್ತೆ ಕರೆ ಬಂದಿದೆ ಎಂದು ತಿಳಿದು ಬಂದಿದೆ. ಆದರೆ ಈತನೇ ಕರೆ ಮಾಡಿದ್ದನೇ ಅಥವಾ ಈತನ ಹೆಸರಿನಲ್ಲಿ ಬೇರೆ ಯಾರಾದರೂ ಕರೆ ಮಾಡಿದರಾ ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ. ಈ ನಡುವೆ ಗಡ್ಕರಿ ಕಚೇರಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ.
ಯಾರೀತ ಜಯೇಶ್ ಕಾಂತಾ?
ನಾಗಪುರದ ನಿತಿನ್ ಗಡ್ಕರಿ ಅವರ ಕಚೇರಿ ಲ್ಯಾಂಡ್ಲೈನ್ಗೆ ಕಳೆದ ಜನವರಿ 14ರ ರಾತ್ರಿ 11.25, 11.32 ಮತ್ತು 12.32ಕ್ಕೆ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದ. ಬಳಿಕ ಪ್ರಾಥಮಿಕ ತನಿಖೆ ವೇಳೆ ಈ ಕರೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೋಗಿರುವುದೆಂದು ಗೊತ್ತಾಗಿತ್ತು. ಅಲ್ಲದೆ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಕರೆ ಮಾಡಿರುವುದು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಆ ಬಳಿಕ ಆತನನ್ನು ನಾಗ್ಪುರದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮತ್ತೆ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು.