ನವದೆಹಲಿ, ಮಾ 21 (DaijiworldNews/DB): ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶ ಮಾತ್ರವಲ್ಲ, ಜಗತ್ತಿಗೇ ಸಂದೇಶ ನೀಡುತ್ತಿದ್ದಾರೆ. ಮೋದಿ ಮಾತನ್ನು ಇಡೀ ವಿಶ್ವವೇ ಎಚ್ಚರಿಕೆಯಿಂದ ಆಲಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ಮೋದಿಯವರನ್ನು ರಷ್ಯಾ ಶಕ್ತಿಕೇಂದ್ರ ಎಂದು ಬಣ್ಣಿಸಿದರೆ, ಅಮೆರಿಕಾ ಕೂಡಾ ಅವರ ದಿಟ್ಟ ನಿಲುವುಗಳನ್ನು ಹೊಗಳಿದೆ. ಅವರ ಮಾತು ಇಡೀ ವಿಶ್ವವೇ ಆಲಿಸುವಂತದ್ದಾಗಿದೆ ಎಂದರು.
ನಮ್ಮ ದೇಶದ ಕೆಲವರು ವಿದೇಶಕ್ಕೆ ಹೋಗಿ ದೇಶದ ವಿರುದ್ದ ಮಾತನಾಡಿ ಪ್ರಚೋದನೆ ನೀಡುತ್ತಿದ್ದಾರೆ. ಆದರೆ ನಮ್ಮ ಪ್ರಧಾನಿಯವರ ಮಾತನ್ನು ಗಂಭೀರವಾಗಿ ಕೇಳಿಸಿಕೊಳ್ಳುವ ಜಗತ್ತು ಅವರ ವ್ಯಕ್ತಿತ್ವ, ಕಾರ್ಯವೈಖರಿಗೆ ತಲೆಬಾಗಿದೆ ಎಂದು ಪ್ರತಿಪಾದಿಸಿದರು.
ಸ್ವತಂತ್ರ ವಿದೇಶಾಂಗ ನೀತಿಯಲ್ಲಿ ಭಾರತ ನಂಬಿಕೆ ಹೊಂದಿದೆ. ದೇಶದ ವಿದೇಶಾಂಗ ನೀತಿಯನ್ನು ರಚಿಸುವಾಗ ದೇಶಕ್ಕೆ ಹಿತವಾಗುವುದನ್ನೇ ಮೋದಿ ಪರಿಗಣಿಸುತ್ತಾರೆ. ಭಾರತ ಏಕಾಂಗಿಯಾಗಿ ಅದ್ಭುತ ಬೆಳವಣಿಗೆ ಕಾಣುತ್ತಿದೆ. ಡಿಜಿಟಲ್ ಕ್ರಾಂತಿಯೇ ದೇಶದಲ್ಲಾಗಿರುವುದಕ್ಕೆ ಮೋದಿ ಕಾರಣ. ಗಾಡಿಯಲ್ಲಿ ತರಕಾರಿ ಮಾರುವವನ ಬಳಿಯೂ ಕ್ಯೂಆರ್ ಕೋಡ್ ಇದೆ ಎಂದಾದರೆ ನಮ್ಮ ದೇಶದ ಡಿಜಿಟಲ್ ಕ್ರಾಂತಿ ಎಷ್ಟು ದೊಡ್ಡಮಟ್ಟದಲ್ಲಾಗಿದೆ ಎಂಬುದು ಗೊತ್ತಾಗುತ್ತದೆ ಎಂದವರು ತಿಳಿಸಿದರು.