ಮೈಸೂರು, ಮಾ 21 (DaijiworldNews/DB): ಅಭೂತಪೂರ್ವ ಜನಬೆಂಬಲದ ಮೂಲಕ ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ. ಇದೇ ತಿಂಗಳ 26ರಂದು ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಮೈದಾನದಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಿಂಗ್ ರಸ್ತೆಯ ಉತ್ತನಹಳ್ಳಿ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಮಾರೋಪದಲ್ಲಿ10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. 100 ಎಕರೆ ವಿಸ್ತಾರದ ವಿಶಾಲ ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮ ಜರಗಲಿದೆ ಎಂದರು.
ವಿಧಾನಸಭಾ ಚುನಾವಣೆಯ ದಿನಾಂಕ ಏಪ್ರಿಲ್ ಮೊದಲ ವಾರದಲ್ಲಿ ಗೋಷಣೆಯಾಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರ ಪ್ರಾರಂಭವಾಗಲಿದೆ. ಪಂಚರತ್ನ ಕಾರ್ಯಕ್ರಮಗಳು ಎಚ್.ಡಿ. ದೇವೇಗೌಡರ ಕನಸು. ಅದರ ಜಾರಿಗೆ 2.5 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿ ರಾಜ್ಯದ ಸಮಗ್ರ ಅಭಿವೃದ್ದಿ ಮಾಡಲಾಗುವುದು. ಸುವರ್ಣ ರಾಮರಾಜ್ಯ ಸ್ಥಾಪನೆ ನಮ್ಮ ಕನಸು ಎಂದವರು ಹೇಳಿದರು.
ಅಮೃತ ಕಾಲದ ಆಗಮನಕ್ಕೆ ಐದು ವರ್ಷ ಸಾಕು, ಅದಕ್ಕೆ 2047ರವರೆಗೆ ಕಾಯಬೇಕಿಲ್ಲ ಎಂದ ಅವರು, ಸುಸಜ್ಜಿತ ಆಸ್ಪತ್ರೆ, ಶಾಲೆ, ಬಡವರಿಗೆ ನಿವೇಶನ, ಮನೆ, ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಇವೆಲ್ಲವೂ ನಮ್ಮ ಪಂಚರತ್ನ ಕಾರ್ಯಕ್ರಮಗಳಲ್ಲಿರುವ ಮಹತ್ವದ ಕಾರ್ಯಗಳು ಎಂದು ಎಚ್.ಡಿಕೆ ತಿಳಿಸಿದರು.
ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರೆಂಟಿ ಕಾರ್ಡ್ಗಳು ನಕಲಿ. ಸುಳ್ಳು ಭರವಸೆ ನೀಡುವ ಮೂಲಕ ಜನರ ಮತ ಗಳಿಸಲು ಆ ಪಕ್ಷ ಹೊರಟಿದೆ. ರಾಜ್ಯದ ಈಗಿನ ಪರಿಸ್ಥಿತಿಯಲ್ಲಿ ಇಂತಹವುಗಳನ್ನೆಲ್ಲ ನೀಡುವುದು ಅಸಾಧ್ಯ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಕುಟುಕಿದರು.
ಜಾಹೀರಾತುಗಳಲ್ಲಿ ಕಾಣಿಸುತ್ತಿರುವ ಬಿಜೆಪಿಯ ಯೋಜನೆಗಳು ಜನರಿಗೆ ತಲುಪಿವೆಯೇ ಎಂದು ಪ್ರಶ್ನಿಸಿದ ಅವರು, ಹಣ ನೀಡಿ ವಿಜಯ ಸಂಕಲ್ಪ ಯಾತ್ರೆಗೆ ಜನ ಸೇರಿಸಲಾಗುತ್ತಿದೆ ಎಂದು ಆಪಾದಿಸಿದರು.
ಒಂದು ಬಾರಿ ಸಿಎಂ, ಎರಡು ಬಾರಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸ್ಪರ್ಧೆಗಾಗಿ ಕ್ಷೇತ್ರ ಹುಡುಕಾಟ ನಡೆಸುತ್ತಿರುವುದನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ ಎಂದು ಎಚ್ಡಿಕೆ ಕಾಲೆಳೆದರು.
ಬಿಜೆಪಿಯು ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಹುಡುಗಾಟಿಕೆ ಆಡುತ್ತಿತ್ತು. ಆದರೀಗ ಚುಂಚಶ್ರೀಗಳ ಎಚ್ಚರಿಕೆಯಿಂದ ಸುಮ್ಮನಾಗಿದ್ದಾರೆ ಎಂದರು.