ಪಂಜಾಬ್, ಮಾ 21 (DaijiworldNews/DB): ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಪ್ರವಾಸದ ಸಂದರ್ಭದಲ್ಲಿ ಏರ್ಪಟ್ಟ ಅತಿದೊಡ್ಡ ಭದ್ರತಾ ಲೋಪ ಪ್ರಕರಣ ಸಂಬಂಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪಂಜಾಬ್ನ ಮಾಜಿ ಡಿಜಿಪಿ ಸಹಿತ ಹಲವು ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ನಿರ್ಧರಿಸಿದ್ದಾರೆ.
2022ರ ಜನವರಿಯಲ್ಲಿ ಪಂಜಾಬ್ಗೆ ಪ್ರಧಾನಿ ಮೋದಿ ಭೇಟಿ ವೇಳೆ ಉಂಟಾದ ಭದ್ರತಾ ಲೋಪ ಸಂಬಂಧಿಸಿದಂತೆ ಹಿಂದಿನ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ, ಹಿಂದಿನ ಡಿಐಜಿ ಇಂದರ್ಬಿರ್ ಸಿಂಗ್, ಹಿರಿಯ ಸೂಪರಿಡೆಂಟ್ ಆಫ್ ಪೊಲೀಸ್ ಹರ್ಮನ್ದೀಪ್ ಸಿಂಗ್ ಸೇರಿದಂತೆ ಹಲವು ಪೊಲೀಸರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.
2022ರ ಜನವರಿ ತಿಂಗಳಲ್ಲಿ ಪಾಕ್ ಗಡಿಗೆ ಹೊಂದಿಕೊಂಡಿರುವ ಫಿರೋಜ್ಪುರದಲ್ಲಿ ರ್ಯಾಲಿ ಮತ್ತು ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ನ ಬರಿಂಡಾಗೆ ಬಂದಿಳಿದು ಅಲ್ಲಿಂದ ರಸ್ತೆ ಮೂಲಕ ಹುಸೇನಿವಾಲಕ್ಕೆ ತೆರಳಿದ್ದರು. ಈ ವೇಳೆ ಮೋದಿ ಕಾರು ಪ್ರತಿಭಟನಾಕಾರರ ನಡುವೆ ಸುಮಾರು 20 ನಿಮಿಷಗಳ ಕಾಲ ಸಿಲುಕಿತ್ತು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
ಲೋಪ ಎಸಗಿದ 9 ಮಂದಿ ಪಂಜಾಬ್ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಚ್ 14ರಂದೇ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಕೆ ಜಂಜುವಾ ಶಿಫಾರಸು ಮಾಡಿದ್ದರು. ಇದೀಗ ಸಿಎಂ ಭಗವಂತ ಮಾನ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ.