ನವದೆಹಲಿ, ಮಾ 21 (DaijiworldNews/DB): ಇಂದು ದೆಹಲಿ ಸರ್ಕಾರ ಬಜೆಟ್ ಮಂಡನೆ ಮಾಡಲುದ್ದೇಶಿಸಿದ್ದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಬಜೆಟ್ಗೆ ತಡೆ ನೀಡಿರುವುದು ದೇಶದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ದೆಹಲಿ ಜನರ ಮೇಲೆ ನೀವು ಯಾಕೆ ಈ ರೀತಿಯ ಕೋಪ ತೋರಿಸುತ್ತಿದ್ದೀರಿ ಎಂದು ಕೇಜ್ರೀವಾಲ್ ಪ್ರಶ್ನಿಸಿದ್ದಾರೆ.
ನಮ್ಮ ಬಜೆಟ್ನ್ನು ಅಂಗೀಕಾರ ಮಾಡಿ. ದೆಹಲಿಯ ಜನರು ನಿಮಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಇನ್ನು ಬಜೆಟ್ನ್ನು ಮರುಪರಿಶೀಲನೆ ನಡೆಸಿ ಎಂಬುದಾಗಿ ಕೇಂದ್ರ ಸರ್ಕಾರವು ಆಮ್ ಆದ್ಮಿ ಪಕ್ಷಕ್ಕೆ ಹೇಳಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಇದಕ್ಕೆ ದೆಹಲಿ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕೇಂದ್ರ ತಿಳಿಸಿದೆ.
ದೆಹಲಿ ಸರ್ಕಾರಕ್ಕೆ ಕೇಂದ್ರದ ಮನವಿಯನ್ನು ಈಗಾಗಲೇ ತಿಳಿಸಲಾಗಿದೆ. ಆದರೆ ಅಲ್ಲಿನ ಹೊಸ ಹಣಕಾಸು ಸಚಿವ ಕೈಲಾಶ್ ಗಹ್ಲೋಟ್, ಮುಖ್ಯ ಕಾರ್ಯದರ್ಶಿಗಳು ಕಡತವನ್ನು ಅಡಗಿಸಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಆರೋಪಿಸಿದ್ದಾರೆ.