ದೆಹಲಿ, ಮಾ 20 (DaijiworldNews/SM): ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್ಗೆ ಭೇಟಿ ನೀಡಿದ ವೇಳೆ ಗೋಲ್ ಗಪ್ಪ(ಪಾನಿ ಪುರಿ) ಮತ್ತು ಲಸ್ಸಿ ಸೇರಿದಂತೆ ಭಾರತೀಯ ವಿವಿಧ ಖಾದ್ಯಗಳನ್ನು ಸೇವಿಸಿದ್ದಾರೆ.
ಕಿಶಿದಾ ಅವರು ಪ್ರಧಾನಿ ಮೋದಿಯವರೊಂದಿಗೆ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಗಾಗಿ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಿಗ್ಗೆ ಭಾರತಕ್ಕೆ ಬಂದಿಳಿದಿದ್ದಾರೆ. ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ತಮ್ಮ ಭೇಟಿಯನ್ನು ಪ್ರಾರಂಭಿಸಿದ ಜಪಾನ್ ಪ್ರಧಾನಿ, ನಂತರ ದೆಹಲಿಯ ಧೌಲಾ ಕುವಾನ್ನಲ್ಲಿರುವ ಬುದ್ಧ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡಿದರು. ಅಲ್ಲಿ ಟಿಬೆಟಿಯನ್ ಜನರಿಗೆ ಕೃತಜ್ಞತೆಯ ಸಂಕೇತವಾಗಿ ಬುದ್ಧನ ಚಿನ್ನದ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ನಾಯಕರ ಸಭೆಗೆ ಕಿಶಿದಾ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದಾರೆ. ಬಳಿಕ ಹೈದರಾಬಾದ್ ಹೌಸ್ನಲ್ಲಿ ಉಭಯ ನಾಯಕರು ಸಭೆ ನಡೆಸಿದರು. ಈ ವರ್ಷ ಆತಿಥೇಯ ರಾಷ್ಟ್ರವಾಗಿ ಭಾರತದ G20 ಗುರಿಗಳ ಬಗ್ಗೆಯೂ ಅವರು ಮಾತನಾಡಿದರು. ನಂತರ ಮಾತನಾಡಿದ ಪ್ರಧಾನಿ ಮೋದಿ, ಪಿಎಂ ಕಿಶಿದಾ ಅವರೊಂದಿಗೆ ಭಾರತದ ಜಿ 20 ಪ್ರೆಸಿಡೆನ್ಸಿ ಬಗ್ಗೆ ಚರ್ಚಿಸಿದ್ದೇನೆ. ಇಂದು, ನಾನು ಪಿಎಂ ಕಿಶಿದಾ ಅವರಿಗೆ ನಮ್ಮ ಜಿ 20 ಅಧ್ಯಕ್ಷ ಸ್ಥಾನದ ಆದ್ಯತೆಗಳ ಬಗ್ಗೆ ವಿವರವಾಗಿ ಹೇಳಿದ್ದೇನೆ. ಜಿ 20 ಅಧ್ಯಕ್ಷ ಸ್ಥಾನದ ಪ್ರಮುಖ ಅಡಿಪಾಯವೆಂದರೆ ಜಾಗತಿಕ ದಕ್ಷಿಣದ ಆದ್ಯತೆಗಳಿಗೆ ಧ್ವನಿ ನೀಡುವುದು ಎಂದರು.
ಇಬ್ಬರು ನಾಯಕರು ಗೋಲ್ ಗಪ್ಪ ಸವಿಯುತ್ತಿರುವ ಆನಂದ ಕ್ಷಣವನ್ನು ಕಾಣಬಹುದಾಗಿದೆ. ಬಳಿಕ ಪ್ರಧಾನಿ ಮೋದಿ, ಫ್ಯೂಮಿಯೊ ಕಿಶಿದಾ ಅವರಿಗೆ ಗೋಲ್ ಗಪ್ಪ ಪಾಕವಿಧಾನದ ಕುರಿತು ವಿವರಿಸಿದ್ದಾರೆ. ಬಳಿಕ ಬೀಸಿಲಿನ ಬೇಗೆಯಿಂದ ತಂಪಾಗಿಸಿಕೊಳ್ಳಲು ಮಾವಿನ ಲಸ್ಸಿ (ಆಮ್-ಪನ್ನಾ) ಯನ್ನು ಇಬ್ಬರು ನಾಯಕರು ಸೇವಿಸಿ ಖುಷಿಪಟ್ಟಿದ್ದಾರೆ. ಸದ್ಯ ಸಾಮಾನ್ಯ ಭಾರತೀಯರ ಇಷ್ಟದ ಆಹಾರವಾದ ಗೋಲ್-ಗಪ್ಪವನ್ನು ಫ್ಯೂಮಿಯೊ ಕಿಶಿದಾ ಮತ್ತು ನರೇಂದ್ರ ಮೋದಿ ಸೇವಿಸಿರುವುದು ಸಾಕಷ್ಟು ವೈರಲ್ ಆಗಿದೆ.