ಚಂಡೀಗಢ, ಮಾ 20 (DaijiworldNews/MS): ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ , ಖಲಿಸ್ಥಾನ ಪರ ಬೆಂಬಲಿಗ ಅಮೃತ್ಪಾಲ್ ಸಿಂಗ್ ನನ್ನು ಬಂಧಿಸುವ ಪಂಜಾಬ್ ಪೊಲೀಸರ ಮೂರನೇ ದಿನದ ಪ್ರಯತ್ನವೂ ಮುಂದುವರಿದಿದೆ. ಈ ನಡುವೆ ಆತನ ಚಿಕ್ಕಪ್ಪ ಮತ್ತು ಚಾಲಕ ಜಲಂಧರ್ನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಅಮೃತಪಾಲ್ ಅವರ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಚಾಲಕ ಹರ್ಪ್ರೀತ್ ಸಿಂಗ್ ಅವರು ಭಾನುವಾರ ತಡರಾತ್ರಿ ಜಲಂಧರ್ನ ಮೆಹತ್ಪುರ ಪ್ರದೇಶದ ಗುರುದ್ವಾರದ ಬಳಿ ಶರಣಾಗಿದ್ದಾರೆ ಎಂದು ಜಲಂಧರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸ್ವರನ್ದೀಪ್ ಸಿಂಗ್ ಹೇಳಿದ್ದಾರೆ.
ರಾಜ್ಯ ಪೊಲೀಸರು ಇದುವರೆಗೆ ಅಮೃತಪಾಲ್ ಅವರ 112 ಬೆಂಬಲಿಗರನ್ನು ಬಂಧಿಸಿದ್ದಾರೆ. ಅಮೃತಪಾಲ್ನ ಪತ್ತೆಗೆ ಸೋಮವಾರವೂ ಪಂಜಾಬ್ ಪೊಲೀಸರು ತೀವ್ರ ಯತ್ನ ಮುಂದುವರಿಸಿದ್ದಾರೆ
ಇನ್ನೊಂದೆಡೆ ಅಮೃತ್ಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿ ಹರಡಿದ್ದು ಇದಕ್ಕೆ ಪುಷ್ಠಿ ನೀಡುವಂತೆ, ಅಮೃತ್ಪಾಲ್ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಅವರ ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.