ನವದೆಹಲಿ, ಮಾ 19 (DaijiworldNews/DB): ಕೇಂದ್ರ ಸರ್ಕಾರ ಕಾಂಗ್ರೆಸ್ ವಿಚಾರದಲ್ಲಿ ಭಯಗೊಂಡಿದೆ. ಇಲ್ಲವಾದರೆ ಭಾರತ್ ಜೋಡೋ ಯಾತ್ರೆ ಮುಗಿದ ಒಂದೂವರೆ ತಿಂಗಳ ಬಳಿಕ ಪೊಲೀಸರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸುವುದೇಕೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬುದಾಗಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಹೇಳಿಕೆ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರ ವಿವರ ಪಡೆದುಕೊಳ್ಳಲು ದೆಹಲಿ ಪೊಲೀಸರು ರಾಹುಲ್ ನಿವಾಸಕ್ಕೆ ಭೇಟಿ ನೀಡಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಾನುಸಾರ ಎಲ್ಲಾ ವಿಚಾರವಾಗಿ ನಾವು ಪ್ರತಿಕ್ರಿಯೆ ನೀಡುತ್ತೇವೆ. ಆದರೆ ಕಾಂಗ್ರೆಸ್ನ ಕ್ರಮಗಳಿಂದಾಗಿ ಕೇಂದ್ರ ಭೀತಿಗೊಂಡಿರುವುದಂತೂ ಸ್ಪಷ್ಟ. ಭಾರತ್ ಜೋಡೋ ಯಾತ್ರೆ ಸಮಾಪನಗೊಂಡು ಒಂದೂವರೆ ತಿಂಗಳು ಕಳೆದಿದೆ. ಈಗ ಅವರ ನಿವಾಸಕ್ಕೆ ಹೋಗಿ ಪ್ರಶ್ನಿಸುವ ವಿಚಾರ ಯಾಕೆ? ಕಾಂಗ್ರೆಸ್ ವಿಚಾರವಾಗಿ ಬಿಜೆಪಿಗೆ ಉಂಟಾಗಿರುವ ಭೀತಿಯೇ ಇದಕ್ಕೆ ಕಾರಣ ಎಂದರು.
ಇನ್ನು ಆಮ್ ಆದ್ಮಿ ಪಕ್ಷದ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರೂ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರವು ರಾಹುಲ್ ಗಾಂಧಿ ವಿರುದ್ದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವುದು ತಪ್ಪು ಎಂದಿದ್ದಾರೆ.