ನವದೆಹಲಿ, ಮಾ 19 (DaijiworldNews/DB): ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಮಿತಿ ಮೀರಿದ್ದಾರೆ. ಅವರನ್ನು ಗಂಟುಮೂಟೆ ಕಟ್ಟಿ ದೇಶದಿಂದ ಬೇರೆಡೆ ಕಳುಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಬಿಜೆಪಿ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಯುವ ಸಂಸತ್ ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, ಯಾರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಕೊಳ್ಳುತ್ತಾರೋ ಅಂತಹವರಿಗೆ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ಥಾನವಿದೆ. ನಂಬಿಕೆ ಕಳೆದುಕೊಂಡವರಿಗೆ ಇಲ್ಲಿ ಸ್ಥಾನವಿಲ್ಲ ಎಂದರು.
ಮಾನಸಿಕವಾಗಿ ದಿವಾಳಿಯಂಚಿಗೆ ತಲುಪಿರುವ ಕಾಂಗ್ರೆಸ್ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಿರುವುದು ಮಾತ್ರವಲ್ಲ. ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಗಳಿಗೆ ಪ್ರಚೋದಿಸಿರುವುದು ಅಕ್ಷಮ್ಯ. ಭಾರತೀಯರು ಅವರ ಮಾತು ಕೇಳುವುದಿಲ್ಲ, ಆದರೆ ಸಹಿಸಿಕೊಂಡಿದ್ದಾರೆ. ಭಾರತದ ಬಗ್ಗೆ ವಿದೇಶದಲ್ಲಿ ಹೀಯಾಳಿಸಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು.