ಕೋಲ್ಕತ್ತಾ, ಮಾ 19 (DaijiworldNews/DB): ವಿಪಕ್ಷಗಳ ಮೈತ್ರಿಕೂಟದಿಂದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ದದ ಹೋರಾಟ ಪ್ರಬಲವಾಗಲಿದೆ. ಪ್ರಾದೇಶಿಕ ಪಕ್ಷಗಳು ಇದರಲ್ಲಿ ಮುಖ್ಯ ಪಾತ್ರ ವಹಿಸಲಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾನುವಾರ ಮಾತನಾಡಿದ ಅವರು, ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುತ್ತಿ೯ಇದ್ದಾರೆ. ಮೈತ್ರಿಕೂಟ ರಚನೆಯ ಬಳಿಕ ಬಿಜೆಪಿಯ ವಿರುದ್ದದ ಹೋರಾಟ ಸುಗಮವಾಗಲಿದೆ ಎಂದರು.
ಬಿಜೆಪಿ ವಿರುದ್ದದ ಹೋರಾಟದಲ್ಲಿ ಪ್ರಾದೇಶಿಕ ಪಕ್ಷಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಇದೊಂದು ದೊಡ್ಡ ಮಟ್ಟದ ಹೋರಾಟವಾಗಿದ್ದು, ಈ ಪ್ರಯತ್ನ ಯಶಸ್ಸು ಕಾಣುತ್ತದೆ ಎಂಬ ಭರವಸೆ ನನಗಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಚುನಾವಣೆಗಳನ್ನು ಎರಡು ಬಾರಿಯೂ ಎದುರಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಭರವಸೆ ಈಡೇರಿಸಿಲ್ಲ. ಇನ್ನು ಉತ್ತರಪ್ರದೇಶದಲ್ಲಿಯೂ ಬಿಜೆಪಿ ತಂತ್ರಕ್ಕೆ ಕಡಿವಾಣ ಹಾಕುವ ಪ್ರಯತ್ನ ಸಾಗಿದೆ. ಅಲ್ಲಿ ಬಿಜೆಪಿ ಸೋತರೆ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಸೋಲು ಖಚಿತವಾಗಲಿದೆ ಎಂದವರು ಇದೇ ವೇಳೆ ಭವಿಷ್ಯ ನುಡಿದರು.