ಚೆನ್ನೈ, ಮಾ 19 (DaijiworldNews/DB): ಅಣ್ಣಾಮಲೈ ರಾಜೀನಾಮೆ ವದಂತಿ ಸುಳ್ಳು. ಅವರು ಆ ರೀತಿ ಎಲ್ಲಿಯೂ ಹೇಳಿಲ್ಲ ಎಂದು ತಮಿಳುನಾಡು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಎಡಿಎಂಕೆಯೊಂದಿಗಿನ ಮೈತ್ರಿ ಮುಂದುವರಿಸಲು ಕೇಂದ್ರ ನಾಯಕರು ನಿರ್ಧರಿಸಿದ್ದಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಣ್ಣಾಮಲೈ ಹೇಳಿದ್ದಾರೆಂಬುದು ಸುಳ್ಳು. ಮೈತ್ರಿ ಬಗ್ಗೆ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಅಲ್ಲದೆ ಮೈತ್ರಿ ನಿರಾಕರಣೆ ಅಣ್ಣಾಮಲೈ ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿಲ್ಲ ಎಂದರು.
ಇನ್ನು ಎಐಎಡಿಎಂಕೆ ಮೈತ್ರಿ ವಿಚಾರವಾಗಿ ಶಾಸಕಿ ವನತಿ ಶ್ರೀನಿವಾಸನ್ ಹಾಗೂ ಅಣ್ಣಾಮಲೈ ಅವರ ನಡುವೆ ವಾಗ್ವಾದ ಏರ್ಪಟ್ಟಿದೆ ಎಂದೂ ಹೇಳಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಚುನಾವಣೆಗಳಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗಿಳಿಯಬೇಕು. ಆ ಮೂಲಕ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಬಿಜೆಪಿ ಬೆಳೆಯಬೇಕೆಂಬ ಹೇಳಿಕೆಯನ್ನು ಅಣ್ಣಾಮಲೈ ನೀಡಿದ್ದಾರೆ ಎನ್ನಲಾಗಿತ್ತು. ಒಂದು ವೇಳೆ ಪಕ್ಷವು ಎಐಎಡಿಎಂಕೆಯೊಂದಿಗಿನ ಮೈತ್ರಿ ಮುಂದುವರಿಸಿದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಣ್ಣಾಮಲೈ ಹೇಳಿದ್ದಾರೆ ಎನ್ನಲಾದ ಸುದ್ದಿಗಳು ಹರಡಿದ್ದವು.