ಬೆಂಗಳೂರು, ಮಾ 18 (DaijiworldNews/DB): ಶುಕ್ರವಾರ ರಾತ್ರಿ ಬಂದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಜಲಾವೃತಗೊಂಡಿರುವ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸರಣಿ ಟ್ವೀಟ್ ಮಾಡಿ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಕಳೆದ ವರ್ಷವೇ ಬೆಂ-ಮೈ ಹೆದ್ದಾರಿ ಮಳೆ ಯಿಂದ ಮುಳುಗಿತ್ತು, ಈಗ ಮತ್ತೊಮ್ಮೆ ಸಣ್ಣ ಮಳೆಗೆ ಅವಾಂತರ ಸೃಷ್ಟಿಯಾಗಿದೆ ಎಂದರೆ ಇದು ಅವೈಜ್ಞಾನಿಕವಾಗಿರುವ ಬಿಜೆಪಿ ಭ್ರಷ್ಟಪಥ ಅಲ್ಲವೇ? ನರೇಂದ್ರ ಮೋದಿ ಅವರು ಈಗ ಬಂದು ರೋಡ್ ಶೋ ಮಾಡಬೇಕೆಂದು ಕಾಂಗ್ರೆಸ್ ಆಹ್ವಾನಿಸುತ್ತದೆ. ರೋಡ್ ಶೋ ಕಾರಿನಲ್ಲಿ ಮಾಡುವರೋ, ಬೋಟಿನಲ್ಲಿ ಮಾಡುವರೋ ಅವರೇ ನಿರ್ಧರಿಸಲಿ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದೋಣಿಗಳಿಗೆ ಟೋಲ್ ಎಷ್ಟು? ಯಾವುದಕ್ಕೂ ದೋಣಿಗಳಿಗೂ ಟೋಲ್ ದರ ನಿಗದಿಪಡಿಸುವುದು ಉತ್ತಮ. ಒಂದು ಸಾಧಾರಣ ಮಳೆಗೆ ಹೆದ್ದಾರಿ ಮುಳುಗುತ್ತದೆ ಎಂದರೆ 40% ಲೂಟಿಯಲ್ಲಿ ಅದೆಷ್ಟು ಕಳಪೆ ಕಾಮಗಾರಿಯಾಗಿರಬಹುದು? ಪ್ರತಾಪ್ ಸಿಂಹ ಅವರೇ, ಈಗ ಫೇಸ್ಬುಕ್ ಲೈವ್ ಮಾಡುವುದಿಲ್ಲವೇ? ಸೆಲ್ಫಿ ತೆಗೆಯುವುದಿಲ್ಲವೇ?' ಎಂದು ಕೆಪಿಸಿಸಿ ಪ್ರಶ್ನೆಸಿದೆ.
ವಾರದ ಹಿಂದೆ ಪ್ರಧಾನಿಗಳಿಂದ ಉದ್ಘಾಟನೆಯಾದ, ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದಂತ, ಬಿಜೆಪಿಯ ಅಭಿವೃದ್ಧಿಯ ದ್ಯೋತಕವಾದ ಏಕೈಕ ಹೈ-ಫೈ ದುಬಾರಿ ಟೋಲ್ ರಸ್ತೆಯು ಒಂದು ಮಳೆಗೆ ಸೃಷ್ಟಿಸಿದ ಅವಾಂತರವಿದು. ಈ ಅವೈಜ್ಞಾನಿಕ ಕಾಮಗಾರಿಗೆ ಈಗ ಯಾರು ಹೊಣೆ ಹೊರುತ್ತೀರಿ? ಪ್ರಧಾನಿ ಮೋದಿ ಅಥವಾ ಪ್ರತಾಪ್ ಸಿಂಹ? ಎಂದು ಪ್ರಶ್ನೆ ಎಸೆಯಲಾಗಿದೆ.
ಇನ್ನು ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿಯು ಜಲಾವೃತವಾಗಿರುವ ಬಗ್ಗೆ ಮಾತನಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಅವರು, ದುಬಾರಿ ಟೋಲ್ ಮಾತ್ರ ಬೇಕು. ಆದರೆ ಅದಕ್ಕೆ ತಕ್ಕ ಸೇವೆ ಒದಗಿಸುವುದು ಸಾಧ್ಯವಿಲ್ಲ. ಪ್ರಯಾಣಿಕರ ಜೀವವನ್ನು ಬಿಜೆಪಿಯ 40% ವ್ಯವಹಾರ ಪಣಕ್ಕಿಟ್ಟಿದೆ. ಭ್ರಷ್ಟಾಚಾರ ಬಿಟ್ಟರೆ ನಿಮ್ಮ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.