ಬೆಂಗಳೂರು, ಮಾ 18 (DaijiworldNews/DB): ಹಾಸನ ಕ್ಷೇತ್ರದ ಟಿಕೆಟ್ಗಾಗಿ ಜೆಡಿಎಸ್ನಲ್ಲಿ ಫೈಟ್ ಶುರುವಾಗಿದೆ. ಕಾರ್ಯಕರ್ತನಿಗೆ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದರೆ, ಪತ್ನಿಗೆ ಟಿಕೆಟ್ ಸಿಗದಕ್ಕೆ ಎಚ್.ಡಿ. ರೇವಣ್ಣ ಅಸಮಾಧಾನ ಹೊರ ಹಾಕಿದ್ದು, ಸದ್ಯ ಹಾಸನ ಕ್ಷೇತ್ರದ ಟಿಕೆಟ್ ಫೈಟ್ ವಿಚಾರ ಎಚ್.ಡಿ. ದೇವೇಗೌಡರ ಬಳಿಗೂ ತಲುಪಿದೆ.
ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತ ಸ್ವರೂಪ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಅಂತಿಮ ಮುದ್ರೆಯೊತ್ತಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಕಳೆದ ಕೆಲ ತಿಂಗಳ ಹಿಂದಷ್ಟೇ ನಾನೇ ಹಾಸನ ಅಭ್ಯರ್ಥಿ ಎಂಬುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಅಲ್ಲಿಂದಲೇ ಜೆಡಿಎಸ್ನೊಳಗೆ ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ನಡೆದಿತ್ತು. ಆದರೀಗ ಪತ್ನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಸ್ವರೂಪ್ಗೂ ಟಿಕೆಟ್ ನೀಡಬಾರದೆಂದು ಎಚ್.ಡಿ. ರೇವಣ್ಣ ಪಟ್ಟು ಹಿಡಿದಿದ್ದಾರೆ. ರೇವಣ್ಣ ನಡೆಯಿಂದ ಅಸಮಾಧಾನಗೊಂಡಿರುವ ಎಚ್ಡಿಕೆ ಈ ವಿಚಾರವನ್ನು ಎಚ್.ಡಿ. ದೇವೇಗೌಡರ ಮುಂದಿಟ್ಟಿದ್ದಾರೆ. ಪಕ್ಷದೊಳಗೆ ಎರಡು ಗುಂಪು ಸೃಷ್ಟಿಯಾದರೆ ಕಾರ್ಯಕರ್ತರಿಗೆ ಗೊಂದಲ ಉಂಟಾಗುತ್ತದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಒಂದು ಟಿಕೆಟ್ಗೆ ಇಷ್ಟೆಲ್ಲಾ ಅಸಮಾಧಾನ ಸೃಷ್ಟಿಯಾದರೆ ಸಮಸ್ಯೆಯಾಗುತ್ತದೆ. ರೇವಣ್ಣರಿಗೆ ಮನವರಿಕೆ ಮಾಡಿಕೊಡಬೇಕು ಎಂಬುದಾಗಿ ಎಚ್ಡಿಕೆ ಅವರು ದೇವೇಗೌಡರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಭವಾನಿ ರೇವಣ್ಣಗೆ ಟಿಕೆಟ್ ಕೈತಪ್ಪಿದ್ದರಿಂದ ಸ್ವರೂಪ್ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿರುವ ಎಚ್.ಡಿ. ರೇವಣ್ಣ ಅವರು ಜೆಡಿಎಸ್ ಹಿರಿಯ ನಾಯಕ ಕೆ.ಎಂ. ರಾಜೇಗೌಡರಿಗೆ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆನ್ನಲಾಗಿದೆ. ಇದರಿಂದಾಗಿ ಇದೀಗ ಕೆ.ಎಂ. ರಾಜೇಗೌಡರಿಗೆ ಹಾಸನ ಕ್ಷೇತ್ರದ ಟಿಕೆಟ್ ಪಕ್ಕಾ ಎನ್ನಲಾಗುತ್ತಿದ್ದು, ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಜೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅಂತಿಮವಾಗಿ ಹಾಸನದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.