ಬಳ್ಳಾರಿ, ಮಾ 18 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ಅಸಾಧ್ಯ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಹೋಗಿ ಸ್ಪರ್ಧಿಸಿದರೆ ಗೆಲ್ಲಬಹುದೇನೋ ಎಂದು ಕಂದಾಯ ಸಚಿವ ಆರ್. ಅಶೋಕ್ ಕುಟುಕಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರುವ ಅವರು ಬಾದಾಮಿ ಬಿಟ್ಟು ಓಡಿದ್ದಾರೆ. ಕೋಲಾರದಲ್ಲಿಯೂ ಗೆಲುವು ಕಷ್ಟವೆಂದು ಈಗ ವರುಣಾ ಕಡೆ ಮುಖ ಮಾಡಿದ್ದಾರೆ. ಆದರೆ ಅವರಿಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲೇ ವಿಲನ್ ಆಗಿ ಕೆಲವರಿದ್ದಾರೆ. ಅವರು ಬೇರೆ ರಾಜ್ಯ ಅಥವಾ ದೇಶ ನೋಡಿಕೊಂಡರೆ ಉತ್ತಮ. ಪಾಕ್, ಬಾಂಗ್ಲಾ, ಅಫ್ಘಾನ್ನಲ್ಲಿ ನಿಂತರೆ ಅವರಿಗೆ ಗೆಲುವು ಸಿಗಬಹುದೇನೋ ಎಂದು ವ್ಯಂಗ್ಯವಾಡಿದರು.
ವಸತಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, ಸೋಮಣ್ಣ ಅವರ ಕೋಪ ಶಮನವಾಗಿದೆ. ಅವರು ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಹಲವು ಮಂದಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿದ್ದಾರೆ. ಎಲ್ಲಾ ಕ್ಷೇತ್ರಗಳನ್ನೂ ನಾವು ತಲುಪಿದ್ದೇವೆ. ಆದರೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಿಟ್ಟರೆ ಬೇರೆ ನಾಯಕರೇ ಇಲ್ಲದಂತಹ ಪರಿಸ್ಥಿತಿ ಇದೆ. ಮತ್ತೊಮ್ಮೆ ಅಧಿಕಾರದ ಕನಸು ಕಾಣುವುದರಲ್ಲಿಯೇ ಅವರು ಬ್ಯುಸಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.