ರಾಮನಗರ, ಮಾ 18 (DaijiworldNews/DB): ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಹೊಸದಾಗಿ ನಿರ್ಮಾಣಗೊಂಡ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಕೃತಕ ಕೆರೆ ಸೃಷ್ಟಿಯಾಗಿದೆ. ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಹೆದ್ದಾರಿ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರರಿಗೆ ಸಂಕಷ್ಟ ಎದುರಾದ ಪ್ರಸಂಗ ನಡೆಯಿತು.
ಕಳೆದ ಆರು ದಿನಗಳ ಹಿಂದಷ್ಟೇ ಬೆಂಗಳೂರು-ಮೈಸೂ7 6ರು ದಶಪಥ ರಸ್ತೆ ಉದ್ಘಾಟನೆಗೊಂಡಿತ್ತು. ಆದರೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿ ನೀರು ನಿಂತ ಕಾರಣ ವಾಹನಗಳು ರಸ್ತೆಯಲ್ಲೇ ಬಾಕಿಯಾದವು. ಕೆಲವು ವಾಹನಗಳು ಕೆಟ್ಟು ನಿಂತರೆ, ಮಳೆಯಿಂದಾಗಿ ಸಂಚಾರ ದುಸ್ತರವಾಗಿ ಕೆಲವು ಅಪಘಾತಗಳೂ ನಡೆದವು. ರಸ್ತೆಯಲ್ಲಿ ಟ್ರಾಫಿಕ್ ಜಾಂ ಕೂಡಾ ಉಂಟಾಯಿತು. ಇದೇ ಸ್ಥಳದಲ್ಲಿ ಲಾರಿಯೊಂದು ತಡೆಗೋಡೆಗೆ ಢಿಕ್ಕಿ ಹೊಡೆದು ಲಾರಿ ಮತ್ತು ಕಾರು ಚಾಲಕರು ಅದೃಷ್ಟವಶಾತ್ ಪಾರಾಗಿದ್ದರು.
ಮಳೆಯಿಂದ ಈ ರಸ್ತೆಯಲ್ಲಿ ಯಾವುದೇ ಸಮಸ್ಯೆ ಆಗದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರಾದರೂ, ಮೊದಲ ಮಳೆಗೇ ಸಂಕಷ್ಟ ಸಂಚಕಾರ ತಂದೊಡ್ಡಿತ್ತು. ಆದರೆ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಯೂ ಇಲ್ಲಿ ಆಗಮಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಸುಮಾರು 130 ಕಿಲೋ ಮೀಟರ್ ಉದ್ದದ ದಶಪಥ ರಸ್ತೆ ಇದಾಗಿದ್ದು, ಈಗಾಗಲೇ ಶೇ. 80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬೆಂಗಳೂರಿನಿಂದ ಮಂಡ್ಯದವರೆಗೆ ಎಲ್ಲಾ ಕಾಮಗಾರಿಗಳು ಮುಗಿದಿದೆ.