ಒಡಿಶಾ, ಮಾ 17 (DaijiworldNews/DB): ಚಾಲಕರ ಮುಷ್ಕರದಿಂದಾಗಿ ವಾಹನ ಅಲಭ್ಯವಾದ ಕಾರಣ ವರನೊಬ್ಬ ಮದುವೆ ಮಂಟಪದ ಕಡೆಗೆ 28 ಕಿಮೀ ತನಕ ನಡೆದೇ ಸಾಗಿದ ಪ್ರಸಂಗ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ನರೇಶ್ ಪ್ರಾಸ್ಕಾ (22) ನಡೆದು ಹೋದ ವರ. ಒಡಿಶಾದಲ್ಲಿ ಚಾಲಕರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾರ್ತಿಗುಡ ಗ್ರಾಮದಿಂದ ಮದುವೆ ತಂಡ ತೆರಳಲು ವಾಹನಗಳು ಸಿಗಲಿಲ್ಲ. ಹೀಗಾಗಿ 28 ಕಿಮೀ ತನಕ ತಂಡವು ನಡೆದುಕೊಂಡೇ ವಧುವಿನ ಸ್ಥಳಕ್ಕೆ ಸಾಗಿದೆ.ಗುರುವಾರ ರಾತ್ರಿ ಹೊರಟ ತಂಡವು ಶುಕ್ರವಾರ ಮುಂಜಾನೆ 3 ಗಂಟೆಗೆ ದಿಬಲಪಾಡುನಲ್ಲಿರುವ ವಧುವಿನ ಗ್ರಾಮಕ್ಕೆ ತಲುಪಿದೆ.
ಮದುವೆ ಮೆರವಣಿಗೆಗೆಂದು ವರ ನರೇಶ್ ನಾಲ್ಕು ಎಸ್ಯುವಿ ವಾಹನಗಳನ್ನು ಕಾಯ್ದಿರಿಸಿದ್ದರು. ಆದರೆ ಚಾಲಕರು ಮುಷ್ಕರಕ್ಕೆ ತೆರಳಿದ ಕಾರಣ ವಾಹನಗಳು ಆಗಮಿಸಲಿಲ್ಲ. ಹೀಗಾಗಿ ಮದುವೆಗೆ ಬೇಕಾದ ಸಾಮಾಗ್ರಿಗಳನ್ನು ದ್ವಿಚಕ್ರ ವಾಹನದಲ್ಲಿ ಕಳುಹಿಸಿ ವರನ ಕಡೆಯಯ ಎಂಟು ಮಹಿಳೆಯರು ಸಹಿತ ಸುಮಾರು 30 ಮಂದಿ ನಡೆದೇ ಸಾಗಿದರು.
ಶುಕ್ರವಾರ ಬೆಳಗ್ಗೆ ವರನ ಕಡೆಯವರ ಆಗಮನಕ್ಕೆ ಕಾಯುತ್ತಿದ್ದ ವಧುವಿನ ಕಡೆಯವರು ಅವರನ್ನು ಸಂಭ್ರಮದಿಂದ ಬರಮಾಡಿಕೊಂಡು ಆರತಿ ಬೆಳಗಿದರು. ಬಳಿಕ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತು.
ನಾವು ಆದಿವಾಸಿಗಳಾಗಿರುವುದರಿಂದ ಬಹುದೂರ ನಡೆದು ಅಭ್ಯಾಸವಿದೆ. ರಸ್ತೆ ಪರಿಚಯ ಇರುವುದರಿಂದ ನಡೆದು ಹೋಗುವುದು ಕಷ್ಟವಾಗಲಿಲ್ಲ. ಇದೊಂದು ಅನುಭವ ಎಂದು ವರನ ಚಿಕ್ಕಪ್ಪ ತಿಳಿಸಿದರು.