ಹಾಸನ, ಮಾ 17 (DaijiworldNews/DB): ನಾನು ನಿಮಗೆ ತೊಂದರೆ ನೀಡಲಾರೆ. ಆದರೆ ನನ್ನನ್ನು ಗೌರವದಿಂದ ನೋಡಿಕೊಳ್ಳಿ. ಇಲ್ಲವಾದರೆ ಕಷ್ಟವಾಗುತ್ತೆ ಎಂದು ಬಹಿರಂಗ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ. ಮಂಜು ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎದುರೇ ಹೇಳಿದ ಪ್ರಸಂಗ ಶುಕ್ರವಾರ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಅವರು, ನನ್ನಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಪ್ರೀತಿಯಿಂದ, ಗೌರವದಿಂದ ನನ್ನನ್ನು ನಡೆಸಿಕೊಳ್ಳಬೇಕು. ಇಲ್ಲವಾದರೆ ಕಷ್ಟವಾಗುತ್ತದೆ ಎಂದರು.
ನನಗೆ ರಾಜಕೀಯದಲ್ಲಿ ಯಾವುದೇ ನಾಯಕರಿಲ್ಲ, ನಾಯಕರಿಲ್ಲದೆ ಉಳಿಯುವುದೂ ಕಷ್ಟ. ಆದರೆ ನನ್ನನ್ನು ಬೆಳೆಸಿದ್ದೇ ಜನ. ಜೊತೆಗೆ ಗೌಡರ ಆಶೀರ್ವಾದ, ಕುಮಾರಣ್ಣನ ವಿಶ್ವಾಸ, ರೇವಣ್ಣರ ಸಹಕಾರ ಎಂದು ಹೇಳಿದರು.
ದೇವೇಗೌರದ ಆಶೀರ್ವಾದದಿಂದ ರಾಜಕೀಯದಲ್ಲಿ ನಾನು ಅಭಿವೃದ್ದಿ ಕೆಲಸಗಳ ಮೂಲಕ ಜನರ ಪ್ರೀತಿಗೆ ಪಾತ್ರನಾಗಿದ್ದೇನೆ. ನಾನು ರಾಜಕೀಯವಾಗಿ ಹಠವಾದಿಯಾದರೂ ದೇವೇಗೌಡರ ಮನಸಿಗೆ ಸೋತಿದ್ದೇನೆ. ಹೊಳೆ ನರಸಿಪುರವನ್ನು ಒಂದು ಕಣ್ಣೆಂದು ನೋಡಿದಂತೆ, ಅರಕಲಗೂಡನ್ನು ಇನ್ನೊಂದು ಕಣ್ಣಾಗಿ ನೋಡಿಕೊಳ್ಳಲು ಮರೆಯದಿರಿ ಎಂದು ಇದೇ ವೇಳೆ ನಾಯಕರಿಗೆ ಹೇಳಿದರು.