ಕಾಶ್ಮೀರ, ಮಾ 17 (DaijiworldNews/DB): ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಜಮ್ಮು ಕಾಶ್ಮೀರದ ಆಡಳಿತಾಧಿಕಾರಿಗಳನ್ನೇ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುಜರಾತ್ನ ಕಿರಣ್ ಭಾಯಿ ಪಟೇಲ್ ಎಂಬಾತ ಬಂಧಿತ ಆರೋಪಿ. ಈತ ತಾನು ಪ್ರಧಾನಮಂತ್ರಿ ಕಚೇರಿಯ ಸ್ಟ್ರಾಟಜಿ ಮತ್ತು ಪ್ರಚಾರ ನಿರ್ವಹಣೆಯ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡು ಕಳೆದ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ. ಗಡಿ ಪ್ರದೇಶವನ್ನು ಪರಿಶೀಲಿಸಬೇಕೆಂದು ಅಲ್ಲಿನ ಅಧಿಕಾರಿಗಳಲ್ಲಿ ಹೇಳಿದ್ದರಿಂದ ಆತನಿಗೆ ಅಧಿಕಾರಿಗಳು ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿ ನೀಡಿ ಕಳುಹಿಸಿದ್ದರು. ಈತ ಗಡಿ ಪರಿಶೀಲನೆ ನಡೆಸಿ ಬಳಿಕ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನೂ ನಡೆಸಿ ಗಡಿ ವಿಚಾರವಾಗಿ ಚರ್ಚೆ ನಡೆಸಿದ್ದ.
ಬಳಿಕ ಈತನ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಹಿಂದಷ್ಟೇ ಕಿರಣ್ ಭಾಯಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧನದ ವಿಚಾರವನ್ನು ರಹಸ್ಯವಾಗಿಟ್ಟಿದ್ದರು. ಕೋರ್ಟ್ಗೆ ಆತನನ್ನು ಹಾಜರುಪಡಿಸಿದ ವೇಳೆ ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು. ಈ ವೇಳೆ ಪ್ರಕರಣ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.